ಬೆಂಗಳೂರು: ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣ ಕಾಯ್ದೆ) ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ಗುರುವಾರ ನಿರಾಕರಿಸಿದೆ.
ನನ್ನ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ಬಿಎಸ್ ಯಡಿಯೂರಪ್ಪ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು 'ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ'ಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂಐ ಅರುಣ್ ವಿಚಾರಣೆ ನಡೆಸಿದರು.
ಆಪಾದಿತ ಅಪರಾಧವನ್ನು ಗಮನದಲ್ಲಿಟ್ಟುಕೊಂಡು, ಬಿಜೆಪಿ ಹಿರಿಯ ನಾಯಕನಿಗೆ ಸಮನ್ಸ್ ಜಾರಿ ಮಾಡಿದ್ದ ವಿಚಾರಣಾ ನ್ಯಾಯಾಲಯದ ಫೆಬ್ರುವರಿ 28ರ ಆದೇಶವನ್ನು ಪೀಠ ಎತ್ತಿಹಿಡಿದಿದೆ.
ಆದರೆ, ಪ್ರಕರಣದ ವಿಚಾರಣೆ ವೇಳೆ ಅನಗತ್ಯವಾಗಿ ವಿಚಾರಣೆಗೆ ಹಾಜರಾಗುವಂತೆ ಯಡಿಯೂರಪ್ಪ ಅವರಿಗೆ ಒತ್ತಾಯಿಸಬಾರದು. ಅವರ ಉಪಸ್ಥಿತಿ ಅಗತ್ಯವಿಲ್ಲದಿದ್ದರೆ, ವಿಚಾರಣೆಗೆ ಹಾಜರಾಗುವುದಕ್ಕೆ ವಿನಾಯಿತಿ ಕೋರಿ ಅವರ ಪರವಾಗಿ ಸಲ್ಲಿಸಲಾದ ಯಾವುದೇ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ಆರೋಪ ಕೈಬಿಡುವುದು ಸೇರಿದಂತೆ ಯಾವುದೇ ಅರ್ಜಿಗಳನ್ನು ಸಲ್ಲಿಸಲು ಅರ್ಜಿದಾರರು ಸ್ವತಂತ್ರರಾಗಿದ್ದಾರೆ ಎಂದು ಏಕಸದಸ್ಯ ಪೀಠ ಸ್ಪಷ್ಟಪಡಿಸಿತು.
ಸಂತ್ರಸ್ತೆಯ ತಾಯಿ ನೀಡಿದ ದೂರಿನ ಪ್ರಕಾರ, 2024ರ ಫೆಬ್ರುವರಿಯಲ್ಲಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಡೆದ ಸಭೆಯ ಸಂದರ್ಭದಲ್ಲಿ ಯಡಿಯೂರಪ್ಪ ಅವರು ತಮ್ಮ 17 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಸದಾಶಿವನಗರ ಪೊಲೀಸರು ಮಾರ್ಚ್ 14, 2024 ರಂದು ಪ್ರಕರಣ ದಾಖಲಿಸಿಕೊಂಡಿದ್ದು, ನಂತರ ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವರ್ಗಾಯಿಸಲಾಯಿತು. ಸಂಸ್ಥೆಯು ಎಫ್‌ಐಆರ್ ಮರು ದಾಖಲಿಸಿ, ಮಾಜಿ ಸಿಎಂ ವಿರುದ್ಧ ಆರೋಪಪಟ್ಟಿ ಸಲ್ಲಿಸಿತು.
ಯಡಿಯೂರಪ್ಪ ಪರ ಹಾಜರಾದ ಹಿರಿಯ ವಕೀಲ ಸಿವಿ ನಾಗೇಶ್, ಪ್ರಕರಣವು ರಾಜಕೀಯ ಪ್ರೇರಿತವಾಗಿದ್ದು, ದೂರಿನಲ್ಲಿ ವಿಶ್ವಾಸಾರ್ಹತೆಯ ಕೊರತೆಯಿದೆ ಎಂದು ವಾದಿಸಿದರು.
ದೂರುದಾರರು ಮತ್ತು ಅವರ ಮಗಳು 2024ರ ಫೆಬ್ರುವರಿಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರನ್ನು ಹಲವು ಬಾರಿ ಭೇಟಿಯಾಗಿದ್ದರು. ಆದರೆ, ಮಾರ್ಚ್ 14ರವರೆಗೆ ಯಾವುದೇ ಆರೋಪವನ್ನು ಉಲ್ಲೇಖಿಸಲಿಲ್ಲ. ಆಪಾದಿತ ಘಟನೆಯ ಸಮಯದಲ್ಲಿ ಹಾಜರಿದ್ದ ಸಾಕ್ಷಿಗಳು ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ ಎಂದು ಅವರು ಗಮನಸೆಳೆದರು.
ವಿಶೇಷ ನ್ಯಾಯಾಲಯವು ದಾಖಲೆಯಲ್ಲಿರುವ ವಿಷಯವನ್ನು ಸರಿಯಾಗಿ ಮೌಲ್ಯಮಾಪನ ಮಾಡದೆ ಕಾಗ್ನಿಜೆನ್ಸ್ ಆದೇಶವನ್ನು ಹೊರಡಿಸುವಾಗ ಯಾಂತ್ರಿಕವಾಗಿ ವರ್ತಿಸಿದೆ. ಆರೋಪಗಳು ಆಧಾರರಹಿತ ಮತ್ತು ದುರುದ್ದೇಶಗಳಿಂದ ಕೂಡಿವೆ. ಹೀಗಾಗಿ, ವಿಚಾರಣೆಯನ್ನು ರದ್ದುಗೊಳಿಸುವಂತೆ ಅವರು ಹೈಕೋರ್ಟ್ ಅನ್ನು ಒತ್ತಾಯಿಸಿದರು.
ಇದನ್ನು ವಿರೋಧಿಸಿದ ವಿಶೇಷ ಸಾರ್ವಜನಿಕ ಅಭಿಯೋಜಕ ಪ್ರೊಫೆಸರ್ ರವಿವರ್ಮ ಕುಮಾರ್, ವಿಶೇಷ ನ್ಯಾಯಾಲಯವು ಸಂತ್ರಸ್ತೆಯ ಹೇಳಿಕೆ ಸೇರಿದಂತೆ ಸಾಕ್ಷ್ಯಗಳನ್ನು ಸರಿಯಾಗಿ ಪರಿಗಣಿಸಿದೆ. ವಿಚಾರಣಾ ನ್ಯಾಯಾಲಯದ ಆದೇಶವು ತಾರ್ಕಿಕವಾಗಿದೆ ಮತ್ತು ಸರಿಯಾದ ಕಾನೂನಿನ ಅಡಿಯಲ್ಲಿದೆ ಎಂದು ವಾದಿಸಿದರು.