ಬೆಂಗಳೂರು: ಸುರಂಗ ರಸ್ತೆ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೇ ಮೆಚ್ಚಿ, ಸಲಹೆ ನೀಡಿದ್ದಾರೆ. ಆದರೆ, ಕರ್ನಾಟಕದ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. ಟನಲ್ ರಸ್ತೆಗೆ ಟೆಂಡರ್ ಅರ್ಜಿ ಹಾಕುವ ಪ್ರಕ್ರಿಯೆ ಬಗ್ಗೆ ಮಾತನಾಡಿದ ಅವರು, ಎಷ್ಟು ಮಂದಿ ಗುತ್ತಿಗೆದಾರರು ಟೆಂಡರ್ ನಲ್ಲಿ ಅರ್ಜಿ ಹಾಕಿದ್ದಾರೆ ಎಂದು ಒಂದೆರಡು ದಿನಗಳಲ್ಲಿ ತಿಳಿಯುತ್ತದೆ. ನಮ್ಮ ಟನಲ್ ರಸ್ತೆಯ ಸ್ವರೂಪ, ಗಾತ್ರದ ಬಗ್ಗೆ ಕೇಂದ್ರ ಸಚಿವ ನಿತೀನ್ ಗಡ್ಕರಿ, ಮುಂಬೈ, ದೆಹಲಿ, ಪುಣೆಯವರು ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಶೇ.50ರಷ್ಟು ಭಾಗ ಕಲ್ಲಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ನಾವು ಮೆಟ್ರೋ ಯೋಜನೆ ಮಾಡಿದ್ದೇವೆ. ಮೆಟ್ರೋ 50% ಮಾರ್ಗ ಟನಲ್ ರೂಪದಲ್ಲಿದೆ. ಆಗ ಯಾರೂ ಮಾತನಾಡಲಿಲ್ಲ. ನಾವು ನಮ್ಮ ಕರ್ತವ್ಯ ಮಾಡುತ್ತೇವೆ. ಬೇರೆ ವಿಚಾರವಾಗಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಇದು ನನಗಾಗಿ ಮಾಡುತ್ತಿರುವ ಯೋಜನೆಯಲ್ಲ. ಇದು ಮುಂದಿನ ಪೀಳಿಗೆಯ ಭವಿಷ್ಯಕ್ಕೆ, ಬೆಂಗಳೂರಿಗಾಗಿ ಎಂದು ತಿರುಗೇಟು ನೀಡಿದರು.
ಇದು ನನ್ನ ಕನಸಿಗಿಂತ ಯುವಕರ ಕನಸು. ನನಗೆ ಗಡ್ಕರಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದ್ದಾರೆ. ಮೋದಿ ಅವರಿಗೆ ಡಬಲ್ ಡೆಕ್ಕರ್ ಯೋಜನೆ ತೋರಿಸಿದೆ. ಪುಣೆ, ಬಾಂಬೆಯಲ್ಲಿ ಟನಲ್ ರಸ್ತೆ ಮಾಡಿದ್ದಾರೆ. ಅಲ್ಲಿ ಎಲ್ಲವೂ ಸರಿಯಾಗಿದೆ. ಕರ್ನಾಟಕದಲ್ಲಿ ಏನೇ ಮಾಡಲು ಹೋದರೂ ವಿರೋಧ ಮಾಡುತ್ತಿದ್ದಾರೆ. ನಾನು ಇದೇ ವಿಧಾನಸೌಧದ ಪಕ್ಕದ ಕೊಠಡಿಯಲ್ಲಿ ಬೆಂಗಳೂರಿನ ಶಾಸಕರನ್ನು ಕರೆದು ಸಭೆ ಮಾಡಿದಾಗ ಏನೇನು ಮಾಡಲು ಹೋರಟಿದ್ದೇನೆ ಎಂದು ಟನಲ್ ರಸ್ತೆ ಬಗ್ಗೆ ಹೇಳಿದಾಗ, ಎಲ್ಲರೂ ಒಪ್ಪಿಕೊಂಡಿದ್ದರು.
ಕೆಲವರು ವಿರೋಧ ಮಾಡುತ್ತಿದ್ದು, ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ವಿರೋಧ ಇದ್ದಷ್ಟು ನಾವು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಮ್ಮ ಅಧಿಕಾರಿಗಳು ಜಾಗೃತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಧ್ಯಮಗಳು ಕೆಲವು ಅಧ್ಯಯನ ಮಾಡಿ ವರದಿ ಬರೆದಿದ್ದಾರೆ. ಅವರ ವರದಿಯಲ್ಲಿ ಒಳ್ಳೆಯ ಅಂಶಗಳಿದ್ದರೆ ಅದನ್ನು ಸ್ವೀಕರಿಸುತ್ತೇವೆ. ತಪ್ಪಾಗಿದ್ದರೆ ತಿದ್ದುಕೊಳ್ಳಲು ಸಿದ್ಧರಿದ್ದೇವೆ. ಬಿಜೆಪಿಯವರು ಟೀಕೆ ಮಾಡಿ ಹೆಚ್ಚಿನ ಪ್ರಚಾರ ನೀಡುತ್ತಿದ್ದು, ಅವರಿಗೆ ಅಭಿನಂದನೆಗಳು ಎಂದು ತಿವಿದರು.
ನಾವು ಚುನಾವಣೋತ್ತರ ಸಮೀಕ್ಷೆಯನ್ನು ನಂಬುವುದಿಲ್ಲ. ಕರ್ನಾಟಕ ಚುನಾವಣೆ ವೇಳೆಯೂ ನಾನು ಈ ಸಮೀಕ್ಷೆಗಳನ್ನು ನಂಬಿರಲಿಲ್ಲ. ಯಾವ ಸಮೀಕ್ಷೆಗಳು ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿರಲಿಲ್ಲ. ಈ ಸಮೀಕ್ಷೆಗಳು ನಮ್ಮ ಪರ ತೋರಿಸಿದರೂ ನಾನು ನಂಬುವುದಿಲ್ಲ. ತಟ್ಟೆಮರೆ ಏಟು ಯಾವ ರೀತಿ ಬೀಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ರಾಜ್ಯದಲ್ಲಿ ನಡೆದ ಉಪಚುನಾವಣೆ ವೇಳೆಯೂ ನಾನು ಮೂರಕ್ಕೆ ಮೂರು ಗೆಲ್ಲುತ್ತೇವೆ ಎಂದು ಹೇಳಿದ್ದೆ. ಫಲಿತಾಂಶ ಬರಲಿ ನೋಡೋಣ, ಇಲ್ಲಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಬಿಹಾರದ ಜನ ಬದಲಾವಣೆ ಬಯಸುತ್ತಿದ್ದು, ಹೀಗಾಗಿ ಮಹಾಘಟಬಂಧನ ಗೆಲ್ಲುವ ಭರವಸೆ ಇದೆ. ಜನ ನೀಡುವ ಆಶೀರ್ವಾದ ನಿರಂತರ ಪ್ರಕ್ರಿಯೆ. ಗೆಲುವು ಸೋಲು ಸಹಜ ಎಂದು ತಿಳಿಸಿದರು. ಬಿಹಾರ ಚುನಾವಣೆ ರಾಜ್ಯ ರಾಜಕಾರಣದ ಮೇಲೆ ಯಾವ ಪರಿಣಾಮವನ್ನು ಬೀರುವುದಿಲ್ಲ. ಕರ್ನಾಟಕ ಅಭಿವೃದ್ಧಿ, ಸಾಮಾಜಿಕ ಬದಲಾವಣೆ ನಾಯಕ ಎಂದು ತಿಳಿಸಿದರು.
ನೀರಿನ ಹೆಜ್ಜೆ ಎಂಬ ಪುಸ್ತಕವನ್ನು ನ.14ರಂದು ಬಿಡುಗಡೆ ಮಾಡಲಿದ್ದೇವೆ. ನೆಹರೂ ಅವರ ಜನ್ಮದಿನ. ಅಂದು ನಾನು ಪುಸ್ತಕ ಬಿಡುಗಡೆ ಮಾಡಲಿದ್ದು, ಮಹದಾಯಿ, ಶರಾವತಿ, ಮೇಕೆದಾಟು ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಮಾತನಾಡುತ್ತೇನೆ ಎಂದರು.