ಕೊಡಗು: ಕಳ್ಳತನ ಮಾಡಿ ಜೈಲು ಸೇರಿದ್ದ ಪತಿ ನಂತರ ಜೈಲಿನಿಂದ ಹೊರಬಂದು ಪತ್ನಿಯನ್ನು ಸೇರಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿತ್ತು. ಇದರಿಂದ ಬೇಸರಗೊಂಡ ಪತಿ ಕೊನೆಗೆ ಪತ್ನಿಗೆ ಕರೆ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ ಸಿಂಕೋನ ಪ್ರದೇಶದಲ್ಲಿ ಸೋಮವಾರಪೇಟೆಯ ಕಿಬ್ಬೆಟ್ಟ ಗ್ರಾಮದ ನಿವಾಸಿ ಕೀರ್ತನ್ ಆತ್ಮಹತ್ಯೆಗೆ ಶರಣಾದ ದುರ್ದೈವಿ. ನವೆಂಬರ್ 15ರ ಸಂಜೆ ಈ ಘಟನೆ ನಡೆದಿದ್ದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿನ್ನೆ ಶನಿವಾರ ಸಂಜೆ ಕೀರ್ತನ್ ತನ್ನ ಪತ್ನಿಯನ್ನು ಕರೆತರಲು ಅತ್ತೆ ಮನೆಗೆ ತೆರಳಿದ್ದನು. ಆದರೆ ಎಷ್ಟೇ ಅಂಗಲಾಚಿದರು ಪತ್ನಿ ತನ್ನೊಂದಿಗೆ ಬರಲು ಒಪ್ಪಲಿಲ್ಲ. ಬೇಸರದಿಂದ ಮನೆಗೆ ಬಂದ ಕೀರ್ತನ್ ಕೊನೆಯ ಪ್ರಯತ್ನವೆಂಬಂತೆ ಪತ್ನಿಗೆ ವಿಡಿಯೋ ಕರೆ ಮಾಡಿ ಮನೆಗೆ ಬರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾನೆ. ಇದಕ್ಕೂ ಪತ್ನಿ ಬಗ್ಗದಿದ್ದಾಗ ಕೀರ್ತನ್ ವಿಡಿಯೋ ಕರೆ ಲೈವ್ನಲ್ಲೇ ಪತ್ನಿ ಮುಂದೆ ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದ ಆಘಾತಗೊಂಡ ಕೀರ್ತನ್ ಪತ್ನಿ ತಕ್ಷಣವೇ ಸ್ಥಳೀಯರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿ ಹೋಗಿತ್ತು.