ಹುಬ್ಬಳ್ಳಿ: ಮೂರು ದಿನಗಳ ಹಿಂದಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸುತ್ತಿದ್ದಾಗ ಅಧಿಕಾರಿಗಳ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪದ ಮೇಲೆ ಹುಬ್ಬಳ್ಳಿಯಲ್ಲಿ ಭಾನುವಾರ ಬೆಳಿಗ್ಗೆ ಇಬ್ಬರು ಕೊಲೆ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಮಂಟೂರು ರಸ್ತೆಯಲ್ಲಿ ಎಂಟರಿಂದ ಹತ್ತು ಜನರು ಮಲಿಕ್ ಜಾನ್ (27) ಎಂಬಾತನನ್ನು ಇರಿದು ಕೊಂದಿದ್ದಾರೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಶಂಕಿತರಾದ ಬಾಲರಾಜ್ ಅಲಿಯಾಸ್ ಬಾಲು ಮತ್ತು ಮೊಹಮ್ಮದ್ ಹಫೀಜ್ ಮತ್ತು ಇತರ ಕೆಲವರನ್ನು ಪೊಲೀಸರು ಬಂಧಿಸಿದ್ದರು.
ಭಾನುವಾರ ಬೆಳಿಗ್ಗೆ, ಅವರ ಗ್ಯಾಂಗ್ ಸದಸ್ಯರು ಅಲ್ಲಿನ ಶೆಡ್‌ನಲ್ಲಿ ಆಗಾಗ್ಗೆ ಭೇಟಿಯಾಗುತ್ತಾರೆ ಎಂಬ ಮಾಹಿತಿ ಆಧಾರದ ಮೇಲೆ ಪೊಲೀಸ್ ತಂಡ ಅವರನ್ನು ಸ್ಥಳ ಪರಿಶೀಲನೆಗಾಗಿ ಮಂಟೂರು ರಸ್ತೆಗೆ ಕರೆದೊಯ್ದಿತು.
ಈ ವೇಳೆ ಸ್ಥಳದಲ್ಲೇ ಆರೋಪಿಗಳು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಮೂವರು ಪೊಲೀಸರು ಗಾಯಗೊಂಡಿದ್ದು, ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಶಿಕುಮಾರ್, ಪೊಲೀಸರು ಬಾಲರಾಜ್ ಮತ್ತು ಹಫೀಜ್ ಸೇರಿದಂತೆ ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಪೊಲೀಸರಿಂದ ತಪ್ಪಿಸಿಕೊಳ್ಳಲು ಬಾಲರಾಜ್ ಕುರಿ ಸಾಗಣೆ ಮಾಡುವ ಕೆಲಸ ಮಾಡುತ್ತಿರುವಂತೆ ನಟಿಸುತ್ತಿದ್ದ. ಆದರೆ, ವಾಸ್ತವದಲ್ಲಿ ಆತ ದರೋಡೆ, ಬೆದರಿಕೆ ಮತ್ತು ವಿವಿಧ ಅಪರಾಧ ಕೃತ್ಯಗಳನ್ನು ಮಾಡುತ್ತಿದ್ದನು. ಯಾವುದೇ ಅಪರಾಧ ಕೃತ್ಯಗಳಲ್ಲಿ ಅವನು ಸಹಾಯಕನಾಗಿ ಕೆಲಸ ಮಾಡುತ್ತಿದ್ದನು ಎಂದು ಹೇಳಿದರು.
ಮತ್ತೊಬ್ಬ ಆರೋಪಿ ಮೊಹಮ್ಮದ್ ಹಫೀಜ್, ಈತನ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ಬಾಕಿ ಇದ್ದು, ಅವುಗಳಲ್ಲಿ ಕೆಲವು ದರೋಡೆ, ಕೊಲೆಯತ್ನ ಮತ್ತು ಕೊಲೆ ಆರೋಪಗಳಿಗೆ ಸಂಬಂಧಿಸಿವೆ ಎಂದು ಅವರು ಹೇಳಿದರು.
ಗುಂಡಿನ ಚಕಮಕಿ ಬಗ್ಗೆ ಮಾತನಾಡಿದ ಶಶಿಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಬಳಿಕ ಆರೋಪಿಗಳ ಕಾಲುಗಳಿಗೆ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಕೂಡ ಗಾಯಗೊಂಡಿದ್ದು, ಆರೋಪಿಗಳ ಜೊತೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಿದರು.