ಬೆಂಗಳೂರು: ಆರು ತಿಂಗಳಿಗೂ ಹೆಚ್ಚು ಕಾಲ ನಡೆದ ಅತ್ಯಾಧುನಿಕ 'ಡಿಜಿಟಲ್ ಅರೆಸ್ಟ್' ಹಗರಣದಲ್ಲಿ 57 ವರ್ಷದ ಮಹಿಳೆಯೊಬ್ಬರು ಸುಮಾರು 32 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಸಿಬಿಐ ಅಧಿಕಾರಿಗಳಂತೆ ನಟಿಸಿದ ವಂಚಕರು, ಅವರನ್ನು ನಿರಂತರ ಸ್ಕೈಪ್ ಕಣ್ಗಾವಲಿನಲ್ಲಿ ಇರಿಸಿಕೊಂಡು ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ. ಬಂಧಿಸುವ ಬೆದರಿಕೆಯೊಡ್ಡಿ ಎಲ್ಲ ಹಣಕಾಸಿನ ವಿವರಗಳನ್ನು ಹಂಚಿಕೊಳ್ಳುವಂತೆ ಮತ್ತು 187 ಬಾರಿ ಬ್ಯಾಂಕ್ ವರ್ಗಾವಣೆಗಳನ್ನು ಮಾಡಿಸಿಕೊಂಡಿದ್ದಾರೆ.
ಇಂದಿರಾನಗರದ ಸಾಫ್ಟ್‌ವೇರ್ ಎಂಜಿನಿಯರ್ ತಮ್ಮ ದೂರಿನಲ್ಲಿ, ವಂಚಕರಿಂದ 'ಕ್ಲಿಯರೆನ್ಸ್ ಲೆಟರ್' ಪಡೆಯುವವರೆಗೆ ಆರು ತಿಂಗಳಿಗಿಂತ ಹೆಚ್ಚು ಕಾಲ ಈ ಸಂಕಷ್ಟ ಮುಂದುವರಿದಿದೆ ಎಂದು ಹೇಳಿದ್ದಾರೆ.
ಇದು 2024ರ ಸೆಪ್ಟೆಂಬರ್ 15 ರಂದು DHL ಅಂಧೇರಿಯವನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಕರೆ ಮಾಡಿ, ಅವರ ಹೆಸರಿನಲ್ಲಿ ಬುಕ್ ಮಾಡಲಾದ ಪಾರ್ಸೆಲ್‌ನಲ್ಲಿ ಕ್ರೆಡಿಟ್ ಕಾರ್ಡ್‌ಗಳು, ಪಾಸ್‌ಪೋರ್ಟ್‌ಗಳು ಮತ್ತು MDMA ಇದೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುವ ಮೊದಲೇ, ಕರೆಯನ್ನು CBI ಅಧಿಕಾರಿಗಳು ಎಂದು ಹೇಳಿಕೊಂಡವರಿಗೆ ವರ್ಗಾಯಿಸಲಾಗಿದೆ. 'ಎಲ್ಲ ಪುರಾವೆಗಳು ನಿಮ್ಮ ವಿರುದ್ಧವಾಗಿವೆ' ಎಂದು ಹೇಳಿ ಆಕೆಯನ್ನು ಬೆದರಿಸಿದ್ದಾರೆ.
ಪೊಲೀಸರನ್ನು ಸಂಪರ್ಕಿಸದಂತೆ ವಂಚಕರು ಆಕೆಗೆ ಎಚ್ಚರಿಕೆ ನೀಡಿದ್ದಾರೆ ಮತ್ತು ಅಪರಾಧಿಗಳು ಆಕೆಯ ಮನೆಯನ್ನು ಗಮನಿಸುತ್ತಿರುವುದಾಗಿ ಹೇಳಿದ್ದಾರೆ. ತನ್ನ ಕುಟುಂಬ ಮತ್ತು ಮಗನ ಮುಂಬರುವ ಮದುವೆ ಬಗ್ಗೆ ಭಯಭೀತರಾಗಿ, ಆಕೆ ಮೌನವಾಗಿದ್ದಾರೆ.
ಮಹಿಳೆಗೆ ಎರಡು ಸ್ಕೈಪ್ ಐಡಿಗಳನ್ನು ಸ್ಥಾಪಿಸಲು ಮತ್ತು ವಿಡಿಯೋದಲ್ಲಿ ಉಳಿಯಲು ಸೂಚಿಸಲಾಗಿದೆ. ಮೋಹಿತ್ ಹಂಡಾ ಎಂದು ಗುರುತಿಸಿಕೊಂಡ ವ್ಯಕ್ತಿ ಎರಡು ದಿನಗಳ ಕಾಲ ಆಕೆಯನ್ನು ಗಮನಿಸಿದ್ದಾನೆ. ನಂತರ ರಾಹುಲ್ ಯಾದವ್ ಎಂದು ಹೇಳಿಕೊಂಡ ವ್ಯಕ್ತಿ ಒಂದು ವಾರ ಆಕೆಯ ಮೇಲೆ ನಿಗಾ ಇಟ್ಟಿದ್ದಾನೆ.
ಹಿರಿಯ ಸಿಬಿಐ ಅಧಿಕಾರಿ ಎಂದು ಹೇಳಿಕೊಂಡ ಪ್ರದೀಪ್ ಸಿಂಗ್ ಎಂಬಾತ, ಪ್ರಕರಣದಲ್ಲಿ ಆಕೆಯ ಪಾತ್ರವಿಲ್ಲ ಎಂಬುದನ್ನು ಸಾಬೀತುಪಡಿಸುವಂತೆ ಒತ್ತಡ ಹೇರಿದ್ದಾನೆ. ಆ ಗುಂಪು ತನ್ನ ಫೋನ್ ಚಟುವಟಿಕೆ ಮತ್ತು ಸ್ಥಳವನ್ನು ತಿಳಿದಿರುವಂತೆ ತೋರಿದ್ದರಿಂದ ನನ್ನ ಭಯ ಹೆಚ್ಚಿತ್ತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಅವರು ತಮ್ಮ ಎಲ್ಲ ಆಸ್ತಿಗಳನ್ನು ಆರ್‌ಬಿಐನ ಹಣಕಾಸು ಗುಪ್ತಚರ ಘಟಕದೊಂದಿಗೆ ಪರಿಶೀಲಿಸಲು ಹೇಳಿದರು ಮತ್ತು ಅದು ಅಧಿಕೃತ ಎಂದು ತೋರಿಸಲು ನಕಲಿ ದಾಖಲೆಗಳನ್ನು ತೋರಿಸಿದರು. ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 22ರವರೆಗೆ, ಉಮಾರಾಣಿ ತಮ್ಮ ಹಣಕಾಸಿನ ವಿವರಗಳನ್ನು ಅವರೊಂದಿಗೆ ಹಂಚಿಕೊಂಡಿದ್ದಾರೆ ಮತ್ತು ದೊಡ್ಡ ಮೊತ್ತವನ್ನು ವರ್ಗಾಯಿಸಿದ್ದಾರೆ.
ಅಕ್ಟೋಬರ್ 24 ರಿಂದ ನವೆಂಬರ್ 3ರ ನಡುವೆ, ಅವರು ಎರಡು ಕೋಟಿ ರೂಪಾಯಿಗಳ ಶ್ಯೂರಿಟಿ ಮೊತ್ತವನ್ನು ಠೇವಣಿ ಇಟ್ಟಿದ್ದಾರೆ. ನಂತರ ತೆರಿಗೆ ಹೆಸರಿನಲ್ಲಿ ಮತ್ತಷ್ಟು ಪಾವತಿಸಿದ್ದಾರೆ.
ಆರೋಪಿಗಳು ಡಿಸೆಂಬರ್ 6 ರಂದು ಅವರ ಮಗನ ನಿಶ್ಚಿತಾರ್ಥಕ್ಕೆ ಮುಂಚಿತವಾಗಿ ಅವರಿಗೆ ಕ್ಲಿಯರೆನ್ಸ್ ಲೆಟರ್ ನೀಡುವ ಭರವಸೆ ನೀಡಿದ್ದಾರೆ. ನಂತರ ನಕಲಿ ಪತ್ರವನ್ನು ಅವರಿಗೆ ನೀಡಿದ್ದಾರೆ.
ಈ ಘಟನೆಯು ಮಹಿಳೆಯನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಅಸ್ವಸ್ಥಗೊಳಿಸಿತು. ಕೊನೆಗೆ, ಸಂತ್ರಸ್ತೆ ಡಿಸೆಂಬರ್ 1 ರಂದು ಕ್ಲಿಯರೆನ್ಸ್ ಲೆಟರ್ ಪಡೆದಿದ್ದಾರೆ. ಅದು ನಿಶ್ಚಿತಾರ್ಥವನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿತು. ಆದರೆ, ಅದರ ನಂತರ ತೀವ್ರವಾಗಿ ಅಸ್ವಸ್ಥರಾದ ಅವರು ಚೇತರಿಸಿಕೊಳ್ಳಲು ಒಂದು ತಿಂಗಳ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿತ್ತು.
'ಇಷ್ಟು ದಿನ ನಾನು ಎಲ್ಲಿದ್ದೇನೆ ಮತ್ತು ಏನು ಮಾಡುತ್ತಿದ್ದೇನೆ ಎಂದು ಸ್ಕೈಪ್ ಮೂಲಕ ವರದಿ ಮಾಡಬೇಕಾಗಿತ್ತು. ಪ್ರದೀಪ್ ಸಿಂಗ್ ಎಂಬ ಈ ವ್ಯಕ್ತಿ ಪ್ರತಿದಿನ ಸಂಪರ್ಕದಲ್ಲಿರುತ್ತಿದ್ದರು. ಎಲ್ಲ ಕಾರ್ಯವಿಧಾನಗಳು ಪೂರ್ಣಗೊಂಡ ನಂತರ ಫೆಬ್ರುವರಿ 25ರೊಳಗೆ ಹಣವನ್ನು ಹಿಂತಿರುಗಿಸಲಾಗುವುದು ಎಂದು ನನಗೆ ಹೇಳಲಾಯಿತು' ಎಂದು ಅವರು ಹೇಳಿದರು.
ಡಿಸೆಂಬರ್ ನಂತರ, ಸ್ಕ್ಯಾಮರ್‌ಗಳು ಸಂಸ್ಕರಣಾ ಶುಲ್ಕ ನೀಡುವಂತೆ ಒತ್ತಾಯಿಸಿದರು. ಮತ್ತು ಮರುಪಾವತಿಯನ್ನು ಫೆಬ್ರುವರಿ ಮತ್ತು ಮಾರ್ಚ್‌ಗೆ ಪದೇ ಪದೆ ವಿಳಂಬ ಮಾಡಿದರು. ಮಾರ್ಚ್ 26, 2025ರಂದು ಅವರ ಎಲ್ಲ ಸಂಪರ್ಕ ಸ್ಥಗಿತಗೊಂಡಿತು.
ಜೂನ್‌ನಲ್ಲಿ ತನ್ನ ಮಗನ ಮದುವೆ ಪೂರ್ಣಗೊಂಡ ನಂತರವೇ ದೂರು ದಾಖಲಿಸಲು ಮುಂದೆ ಬಂದರು. 'ಒಟ್ಟಾರೆಯಾಗಿ, 187 ವಹಿವಾಟುಗಳ ಮೂಲಕ ನಾನು ಠೇವಣಿ ಇಟ್ಟಿದ್ದ ಸುಮಾರು 31.83 ಕೋಟಿ ರೂ.ಗಳನ್ನು ವರ್ಗಾಯಿಸಿ ವಂಚನೆಗೊಳಗಾಗಿದ್ದೇನೆ' ಎಂದು ಅವರು ಹೇಳಿದರು.