ಹಂಪಿ/ಹೊಸಪೇಟೆ: ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಹಂಪಿಯಲ್ಲಿ ಪ್ರಸಕ್ತ ಸಾಲಿನಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಕುಸಿತವಾಗಿರುವುದು ಕಂಡು ಬಂದಿದೆ.
2024–25ರಲ್ಲಿ ಅಕ್ಟೋಬರ್ ವರೆಗೆ ಕೇವಲ 3,818 ವಿದೇಶಿ ಪ್ರವಾಸಿಗರು ಹಂಪಿಗೆ ಭೇಟಿ ನೀಡಿದ್ದಾರೆ, ಹಿಂದಿನ ವರ್ಷದಲ್ಲಿ ಈ ಸಂಖ್ಯೆ 19,838 ರಷ್ಟಿತ್ತು. ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ, ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ತೀವ್ರ ಕುಸಿತವಾಗಿರುವುದು ಕಂಡು ಬಂದಿದೆ. ಆದರೆ, ಇದೇ ಅವಧಿಯಲ್ಲಿ ದೇಶೀಯ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಇದೇ ಅವಧಿಯಲ್ಲಿ 4,46,441 ಮಂದಿ ಭೇಟಿ ನೀಡಿದ್ದಾರೆ.
ಪ್ರವಾಸಿಗರ ಸಂಖ್ಯೆ ಕುಸಿತಕ್ಕೆ ಸುರಕ್ಷತಾ ಕಳವಳ ಹಾಗೂ ಮೂಲಸೌಕರ್ಯ ಸಮಸ್ಯೆಯೇ ಕಾರಣ ಎಂದು ಹೇಳಲಾಗುತ್ತಿದೆ.
ಕಳೆದ ಬೇಸಿಗೆಯಲ್ಲಿ ಸಣಾಪುರ ಬಳಿ ಲೈಂಗಿಕ ದೌರ್ಜನ್ಯ ಮತ್ತು ವಿದೇಶಿ ಪ್ರಯಾಣಿಕರ ಕೊಲೆ ಪ್ರಕರಣ ವರದಿಯಾಗಿತ್ತು.
ಈ ಘಟನೆ ಬೆನ್ನಲ್ಲೇ ಹಂಪಿ ಸುರಕ್ಷಿತವೇ ಎಂದ ಪ್ರಶ್ನೆಗಳು ಆರಂಭವಾಗತೊಡಗಿದವು. ಸಾಕಷ್ಟು ಪ್ರವಾಸಿಗರು, ಮಾರ್ಗದರ್ಶಕರು, ಪ್ರಯಾಣ ನಿರ್ವಾಹಕರನ್ನು ಪ್ರಶ್ನೆ ಮಾಡಿದ್ದು, ಘಟನೆ ಬಳಿಕ ಯುರೋಪ್ ಮತ್ತು ಪೂರ್ವ ಏಷ್ಯಾದಿಂದ ಹಲವಾರು ಗ್ರೂಪ್ ಟ್ರಿಪ್ ಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.
ವಿದೇಶಿ ಪ್ರವಾಸಿಗರು ಸಾಮಾನ್ಯವಾಗಿ ಕಳಪೆ ನೈರ್ಮಲ್ಯ, ಮಾಹಿತಿ ಕೇಂದ್ರಗಳ ಸೀಮಿತ ಲಭ್ಯತೆ ಮತ್ತು ವಿಶ್ವಾಸಾರ್ಹವಲ್ಲದ ಸಾರಿಗೆಯನ್ನು ಪ್ರಮುಖ ಅಡಚಣೆಗಳೆಂದು ಉಲ್ಲೇಖಿಸುತ್ತಾರೆ.
ಈ ನಡುವೆ ಪ್ರವಾಸೋದ್ಯಮ ಸಂಘಗಳು ಭದ್ರತಾ ಕ್ರಮಗಳು, ಮೀಸಲಾದ ಪ್ರವಾಸೋದ್ಯಮ ಪೋಲೀಸಿಂಗ್, ಸುಧಾರಿತ ಕೊನೆಯ ಮೈಲಿ ಸಂಪರ್ಕ, ನೈರ್ಮಲ್ಯ ಮತ್ತು ಅಂತರರಾಷ್ಟ್ರೀಯ ಪ್ರಚಾರ ಅಭಿಯಾನಗಳ ನಡೆಸುವಂತೆ ಒತ್ತಾಯಿಸಿವೆ.
ಈ ನಡುವೆ ಹಂಪಿ ಬಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ದೀರ್ಘಕಾಲದ ಪ್ರಸ್ತಾಪ ಕುರಿತಂತೆ ಆಗ್ರಹಗಳು ವ್ಯಕ್ತವಾಗುತ್ತಿವೆ.
ಹಂಪಿ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಡಿಯಲ್ಲಿರುವ ಗ್ರಾಮಗಳ ಕಲ್ಯಾಣ ಸಂಘದ ಅಧ್ಯಕ್ಷೆ ವಿರೂಪಾಕ್ಷಿ ವಿ ಹಂಪಿ ಅವರು ಮಾತನಾಡಿ, ವಿದೇಶಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿರುವುದು ನಿರಾಶಾದಾಯಕವಾಗಿದೆ ಎಂದು ಹೇಳಿದ್ದಾರೆ.
ಈ ಕುಸಿತವು ಈಗಾಗಲೇ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯ ಪ್ರವಾಸೋದ್ಯಮ ನಿರ್ವಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳು ಮಾತನಾಡಿ, ಸುರಕ್ಷತೆ-ಜಾಗೃತಿ ಕಾರ್ಯಕ್ರಮಗಳು ಮತ್ತು ಮೂಲಸೌಕರ್ಯ ನವೀಕರಣಗಳ ಪ್ರಸ್ತಾಪಗಳು ಪರಿಶೀಲನೆಯಲ್ಲಿವೆ ಮತ್ತು ಸ್ಥಳೀಯರೊಂದಿಗೆ ಸಮಾಲೋಚನೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.