ಬೆಂಗಳೂರು: 25 ವರ್ಷದ ಮಹಿಳೆಯೊಬ್ಬರು ತಮ್ಮ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿ, ಅವರ ಮೊಬೈಲ್ ಫೋನ್ ದೋಚಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ನವೆಂಬರ್ 7 ರಂದು ರಾತ್ರಿ 10.30ರ ಸುಮಾರಿಗೆ ಉಪಕಾರ್ ಲೇಔಟ್‌ನಲ್ಲಿ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ಆರೋಪಿಯು ಆಕೆಯ ನಾಯಿಯನ್ನು ತಾನು ಸಾಕಬಹುದೇ ಎಂದು ಕೇಳುತ್ತಾ ಆಕೆಯ ಬಳಿಗೆ ಬಂದು ಮಾತುಕತೆ ಆರಂಭಿಸಿದ್ದಾನೆ. ಆಕೆ ಹೊರಡಲು ಪ್ರಯತ್ನಿಸಿದಾಗ, ಆ ವ್ಯಕ್ತಿ ಇದ್ದಕ್ಕಿದ್ದಂತೆ ಆಕೆಯೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾನೆ.
ಮಹಿಳೆ ಅವನನ್ನು ದೂರ ತಳ್ಳಿದ ನಂತರ, ಅವನು ಮತ್ತೆ ಆಕೆಯನ್ನು ಮುಟ್ಟಲು ಪ್ರಯತ್ನಿಸಿದ್ದಾನೆ. ಆಗ ಆಕೆ ಆತನನ್ನು ಹೊಡೆದಿದ್ದಾರೆ. ಈ ಸಮಯದಲ್ಲಿ ಆಕೆಯ ಮೊಬೈಲ್ ಫೋನ್ ಕೆಳಗೆ ಬಿದ್ದಿದೆ. ಸಹಾಯಕ್ಕಾಗಿ ಕಿರುಚಿದಾಗ, ಆ ವ್ಯಕ್ತಿ ಫೋನ್ ಎತ್ತಿಕೊಂಡು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
'ದೂರಿನ ಆಧಾರದ ಮೇಲೆ, ನವೆಂಬರ್ 8 ರಂದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 74 (ಮಹಿಳೆ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲವಂತ), 75(2) (ಲೈಂಗಿಕ ಕಿರುಕುಳ), 303(2) (ಕಳ್ಳತನ) ಮತ್ತು 115(2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಶಂಕಿತನನ್ನು ಗುರುತಿಸಿ ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.