ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ-ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿ ಭೇಟಿ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಸಂಪುಟ ಪುನಾರಚನೆಯೋ ಅಥವಾ ನಾಯಕತ್ವ ಬದಲಾವಣೆಯೋ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಈ ನಡುವೆ ಸಿಎಂ- ಡಿಸಿಎಂ ಮಾತ್ರ ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು. ಅಷ್ಟೇ ಅಲ್ಲ, ಇಬ್ಬರೂ ಒಟ್ಟಿಗ ಭೋಜನ ಸವಿದರು.
ದೆಹಲಿಯ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದಿಢೀರ್ ಮುಖಾಮುಖಿಯಾದರು. ಈ ವೇಳೆ ನಗುಮೊಗದಲ್ಲೇ ಪರಸ್ಪರ ಹಸ್ತಲಾಘವ ಮಾಡಿ, ಸ್ಥಳದಲ್ಲಿದ್ದ ಮಾಧ್ಯಮಗಳಿಗೆ ಪೋಸು ಕೊಟ್ಟರು. ನಂತರ ಇಬ್ಬರೂ ಮಧ್ಯಾಹ್ನದ ಊಟವನ್ನೂ ಸವಿದರು.
ನ. 14ಕ್ಕೇ ದೆಹಲಿಗೆ ತೆರಳಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ಅಲ್ಲಿಯೇ ಬೀಡುಬಿಟ್ಟಿದ್ದರು. ಈ ಅವಧಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ, ಹಲವು ರಾಜಕೀಯ ವಿಷಯಗಳ ಕುರಿತು ಚರ್ಚೆ ನಡೆಸಿದರು. ಅದರಲ್ಲಿ ನಾಯಕತ್ವ ಬದಲಾವಣೆ ಕೂಡ ಒಂದಾಗಿತ್ತು ಎಂದು ಹೇಳಲಾಗುತ್ತಿದೆ.