ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತಿತರ ಮೂವರು ಸಹ-ಆರೋಪಿಗಳಿಗೆ ಬೆಂಗಳೂರಿನ ತ್ವರಿತ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಡಿಸೆಂಬರ್ 2 ರಂದು ನಾಲ್ವರು ಆರೋಪಿಗಳು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.
ವಿಚಾರಣೆ ಮುಂದುವರಿಯಲು ಕರ್ನಾಟಕ ಹೈಕೋರ್ಟ್ ದಾರಿ ಸುಗಮಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ. ನವೆಂಬರ್ 13 ರಂದು ಯಡಿಯೂರಪ್ಪ ಮತ್ತು ಇತರ ಮೂವರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿತ್ತು.
ಪೋಕ್ಸೋ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅಪರಾಧಗಳನ್ನು ಗುರುತಿಸುವ ವಿಚಾರಣಾ ನ್ಯಾಯಾಲಯದ ಆದೇಶ ಮತ್ತು ಸಮನ್ಸ್ ಜಾರಿಯನ್ನು ಪ್ರಶ್ನಿಸಿ ಯಡಿಯೂರಪ್ಪ ಮತ್ತು ಇತರ ಸಹ-ಆರೋಪಿಗಳಾದ ಅರುಣಾ ವೈ.ಎಂ., ರುದ್ರೇಶ ಮರುಳಸಿದ್ದಯ್ಯ ಮತ್ತು ಮರಿಸ್ವಾಮಿ ಜಿ ಸಲ್ಲಿಸಿದ್ದ ಅರ್ಜಿಗಳನ್ನು ಅದು ವಜಾಗೊಳಿಸಿತ್ತು.
ಆದಾಗ್ಯೂ ವಿಚಾರಣೆಯ ಸಮಯದಲ್ಲಿ ಯಡಿಯೂರಪ್ಪ ಅವರ ಖುದ್ದು ಹಾಜರಾತಿಯನ್ನು ಕಡ್ಡಾಯಗೊಳಿಸಬಾರದು ಮತ್ತು ಅವರ ಉಪಸ್ಥಿತಿ ಅತ್ಯಗತ್ಯವೆಂದು ಪರಿಗಣಿಸದ ಹೊರತು ಅವರ ಪರವಾಗಿ ಸಲ್ಲಿಸಲಾದ ಯಾವುದೇ ವಿನಾಯಿತಿ ಅರ್ಜಿಯನ್ನು ಪರಿಗಣಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿತ್ತು.
ಫೆಬ್ರವರಿಯಲ್ಲಿ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಯಡಿಯೂರಪ್ಪ ಅವರು ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ 17 ವರ್ಷದ ಬಾಲಕಿಯ ತಾಯಿ 2024 ರ ಮಾರ್ಚ್‌ನಲ್ಲಿ ದೂರು ದಾಖಲಿಸಿದ್ದರು. ಸಹಾಯ ಕೋರಿ ಅವರನ್ನು ಸಂಪರ್ಕಿಸಿದ ನಂತರ ಯಡಿಯೂರಪ್ಪ ಅವರು ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಆರೋಪಗಳ ಗಂಭೀರತೆಯಿಂದಾಗಿ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಯಿತು.
ಜೂನ್ 2024 ರಲ್ಲಿ, ಸಿಐಡಿ ಯಡಿಯೂರಪ್ಪ ಮತ್ತು ಮೂವರು ಸಹಾಯಕರ ವಿರುದ್ಧ ಲೈಂಗಿಕ ದೌರ್ಜನ್ಯ, ಸಾಕ್ಷ್ಯ ನಾಶ ಆರೋಪ ಹೊರಿಸಿ 750 ಪುಟಗಳಿಗೂ ಹೆಚ್ಚು ವಿವರವಾದ ಚಾರ್ಜ್‌ಶೀಟ್ ಸಲ್ಲಿಸಿತ್ತು. ಸಂತ್ರಸ್ತೆ ಹಾಗೂ ಆಕೆಯ ತಾಯಿ ಇಬ್ಬರೂ ಮ್ಯಾಜಿಸ್ಟ್ರೇಟ್ ಮುಂದೆ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದರು. ಹುಡುಗಿಯ ತಾಯಿ ಮೇ 26, 2024 ರಂದು ಸಾವನ್ನಪ್ಪಿದ್ದಾರೆ.