ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಕ್ಕಾಗಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ 62 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಕಾಡುಗೋಡಿ ಬಳಿಯ ಬೆಲ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಆರೋಪಿಯು ನವೆಂಬರ್ 13 ರಂದು ರಾತ್ರಿ 11. 25 ಕ್ಕೆ ಬಿಎಂಆರ್‌ಸಿಎಲ್‌ಗೆ ಬೆದರಿಕೆ ಇಮೇಲ್ ಕಳುಹಿಸಿದ್ದ.
ಕರ್ತವ್ಯದ ಸಮಯದ ನಂತರ ತನ್ನ ಮಾಜಿ ಪತ್ನಿಯನ್ನು "ಮಾನಸಿಕವಾಗಿ ಹಿಂಸಿಸಿದರೆ", ಇಲ್ಲಿನ ಮೆಟ್ರೋ ನಿಲ್ದಾಣಗಳಲ್ಲಿ ಒಂದನ್ನು ಸ್ಫೋಟಿಸುವುದಾಗಿ ಮೆಟ್ರೋ ನೌಕರರಿಗೆ ಎಚ್ಚರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದ್ದು, ಶಂಕಿತನನ್ನು ಬಂಧಿಸಲಾಗಿದೆ.ಆತ ಮಾನಸಿಕ ಅಸ್ವಸ್ಥರೆಂದು ಕಂಡುಬಂದಿದ್ದು, ನಿಮ್ಹಾನ್ಸ್‌ಗೆ ಕಳುಹಿಸಲಾಗಿದೆ" ಎಂದು ಹೇಳಿದರು.
ಬಿಎಂಆರ್‌ಸಿಎಲ್ ಅಧಿಕಾರಿಯ ದೂರಿನ ಆಧಾರದ ಮೇಲೆ, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 351 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ಆರಂಭಿಸಲಾಗಿದೆ ಎಂದು ಅವರು ಹೇಳಿದರು.