ಮಂಡ್ಯ: ಶಿವನಸಮುದ್ರ ಬಳಿಯ ನಾಲೆಗೆ ಬಿದ್ದು ಪ್ರಾಣಾಪಾಯದಿಂದ ಒದ್ದಾಡುತ್ತಿದ್ದ ಕಾಡಾನೆಯನ್ನು ರಕ್ಷಿಸುವಲ್ಲಿ ಕೊನೆಗೂ ಕರ್ನಾಟಕ ಅರಣ್ಯ ಇಲಾಖೆ ಯಶಸ್ವಿಯಾಗಿದ್ದು, ಅರಣ್ಯಾಧಿಕಾರಿಗಳ ಸಾಹಸಕ್ಕೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಮಂಡ್ಯ ಜಿಲ್ಲೆಯ ಶಿವನಸಮುದ್ರದ ಬಳಿಯ ನಾಲೆಯಲ್ಲಿ ಮೂರು ದಿನಗಳ ಹಿಂದೆ ಬಿದ್ದಿದ್ದ ಕಾಡಾನೆಯನ್ನು ರಕ್ಷಿಸಲು ಅರಣ್ಯ ಇಲಾಖೆ ನಡೆಸಿದ್ದ ಮ್ಯಾರಥಾನ್ ರಕ್ಷಣಾ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ. ಅರಣ್ಯ ಇಲಾಖೆಯ ಸತತ ಕಾರ್ಯಾಚರಣೆಯಿಂದಾಗಿ ನಾಲೆಗೆ ಬಿದ್ದಿದ್ದ ಕಾಡಾನೆ ಜೀವಂತ ಪಾರಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಕ್ರೇನ್ ಮೂಲಕ ನಾಲೆಯಿಂದ ಕಾಡಾನೆಯನ್ನು ಮೇಲೆತ್ತಿದ್ದಾರೆ. ಬಳಿಕ ಅದಕ್ಕೆ ಚಿಕಿತ್ಸೆ ನೀಡಿ ಸಮೀಪದ ಹಲಗೂರು ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಹಾರ ಅರಸಿ ಬಂದು ನಾಲೆಗೆ ಬಿದ್ದ ಕಾಡಾನೆ
ಅಧಿಕಾರಿಗಳ ಪ್ರಕಾರ 10 ರಿಂದ 15 ವರ್ಷ ಪ್ರಾಯದ ಕಾಡಾನೆ ಆಹಾರ ಅರಸಿ ಬಂದು ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವವಸಮುದ್ರ ಬಳಿಯ ನಾಲೆಗೆ ಬಿದ್ದಿತ್ತು. ಖಾಸಗಿ ಪವರ್ ಸ್ಟೇಷನ್ಗೆ ನೀರು ಸರಬರಾಜು ಮಾಡುವ ನಾಲೆಯಲ್ಲೇ 3 ದಿನದಿಂದ ಆನೆ ಸಿಲುಕಿತ್ತು. ಈ ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸ್ಥಳದಲ್ಲೇ ಬೀಡುಬಿಟ್ಟು ನಿರಂತರ ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ರಕ್ಷಿಸಿದ್ದಾರೆ.
ನೀರು ಕುಡಿಯಲು ಬಂದು ಕೆಳಗೆ ಬಿದ್ದ ಆನೆ
ಶನಿವಾರ ಬೆಳಗ್ಗೆ 11.15ರ ಸುಮಾರಿಗೆ ಕಾವೇರಿ ನದಿಗೆ ಹೊಂದಿಕೊಂಡಂತೆ ಇರುವ ಬ್ಲಫ್‌ನ ಪಯನಿಯರ್ ಜಂಕೋ ಲಿಮಿಟೆಡ್ ಪವರ್ ಜನರೇಶನ್ ಯುನಿಟ್‌ನ 20 ಅಡಿ ಆಳದ ಕ್ಯಾನಲ್‌ಗೆ ನೀರು ಕುಡಿಯಲು ಬಂದು ಗಂಡಾನೆ ಆಕಸ್ಮಿಕವಾಗಿ ಇಳಿದಿದೆ. ನಂತರ ನೀರಿನ ಹರಿವಿನ ರಭಸಕ್ಕೆ ವಾಪಸ್ ಕೆನಾಲ್‌ನಿಂದ ಮೇಲಕ್ಕೆ ಬರಲು ಆಗದೆ ಕಾಡಾನೆ ಒದ್ದಾಡಿದೆ.
ಮ್ಯಾರಥಾನ್ ಕಾರ್ಯಾಚರಣೆ
ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಕಾಡಾನೆಗೆ ಆಹಾರ ನೀಡುತ್ತಾ ಅದರ ಆರೋಗ್ಯ ಮೇಲ್ವಿಚಾರಣೆ ನಡೆಸಿದ್ದರು. ನಾಲೆಯಿಂದ ಆನೆಯನ್ನ ಮೇಲೆತ್ತಲು ಅರಣ್ಯ ಇಲಾಖೆ ಸಿಬ್ಬಂದಿ ನಿನ್ನೆ ಪ್ರಯತ್ನ ಪಟ್ಟಿದ್ದರು. ಆದರೆ ನಾಲೆಯಲ್ಲಿ ನೀರು ಹೆಚ್ಚಾಗಿದ್ದ ಕಾರಣ ಕಾರ್ಯಚರಣೆಗೆ ತೊಡಕಾಗಿತ್ತು. ಇಂದು ನಾಲೆಯ ನೀರನ್ನು ತಗ್ಗಿಸಿ ಕಾರ್ಯಚರಣೆ ಮಾಡಲಾಗಿದೆ.
ಮೊದಲಿಗೆ ಪಟಾಕಿ ಸಿಡಿಸಿ ತಾನಾಗಿಯೇ ಕಾಡಾನೆ ಮೇಲಕ್ಕೆ ಬರುವಂತೆ ಪ್ರಯತ್ನಿಸಲಾಯಿತು. ಆದರೆ ಅದು ಸಾಧ್ಯವಾಗಿಲ್ಲ. ಹೀಗಾಗಿ ಅರಣ್ಯ ಇಲಾಖೆ ಕಂಟೇನರ್ ಬಳಿಸಿ ಕಾಡಾನೆಯನ್ನು ಮೇಲಕ್ಕೆ ತಂದಿದೆ. ಕಾಡಾನೆಗೆ 2 ಬಾರಿ ಅರಿವಳಿಕೆ ಚುಚ್ಚುಮದ್ದು ನೀಡಿ ಅದು ಪ್ರಜ್ಞೆ ಕಳೆದುಕೊಂಡ ಬಳಿಕ ಅದನ್ನು ಕ್ರೇನ್ ಮೂಲಕ ಮೇಲಕ್ಕೆ ತಂದು ಚಿಕಿತ್ಸೆ ನೀಡಲಾಯಿತು.
ಬಳಿಕ ಆನೆ ಪ್ರಜ್ಞೆಗೆ ಮರಳಿದ ಬಳಿಕ ಆನೆಯನ್ನು ಹಲಗೂರು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅರಣ್ಯ ಸಿಬ್ಬಂದಿ ಹಾಗೂ ವೈದ್ಯರ ತಂಡ ಕೂಡ ಕಾಡಿಗೆ ತೆರಳಿದ್ದು ಆನೆಯ ಮೇಲ್ವಿಚಾರಣೆಯಲ್ಲಿ ತೊಡಗಿದೆ.
ಆನೆಗೆ ಫಂಗಸ್ ಇನ್ಫೆಕ್ಷನ್?
4 ದಿನಗಳಿಂದ ನೀರಿನೊಳಗೆಯೇ ಇದ್ದ ಕಾರಣ ಕಾಡಾನೆ ಕಾಲಿಗೆ ಫಂಗಸ್ ಆಗಿರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಅಲ್ಲದೇ ಸರಿಯಾಗಿ ಆಹಾರವಿಲ್ಲದೆ ಕಾಲುವೆಯಲ್ಲಿ ಆನೆ ಒದ್ದಾಡಿತ್ತು. ಹೀಗಾಗಿ ಆನೆಯ ಆರೋಗ್ಯ ತಪಾಸಣೆ ನಡೆಸಿದ ಬಳಿಕ ವೈದ್ಯರು ಕೆಲ ಚಿಕಿತ್ಸೆ ನೀಡಲಿದ್ದಾರೆ. ಬಳಿಕ ಆನೆಯ ಆರೋಗ್ಯದ ಮೇಲ್ವಿಚಾರಣೆ ಮಾಡಿ ಹಿಂದಿರುಗಲಿದ್ದಾರೆ ಎಂದು ಹೇಳಲಾಗಿದೆ.
ಕ್ರೇನ್ ಮೂಲಕ ಕಾಡಾನೆ ರಕ್ಷಣೆ
2 ಅರಿವಳಿಕೆ ಚುಚ್ಚುಮದ್ದು ನೀಡಿದ ನಂತರ ಕಾಡಾನೆ ಪ್ರಜ್ಞೆತಪ್ಪಿ ನಾಲೆಯಲ್ಲೇ ಕುಸಿದುಬಿದ್ದಿದೆ. ಬಳಿಕ ಸಿಬ್ಬಂದಿ ನಾಲೆಗೆ ಇಳಿದು ಕಾಡಾನೆಯ ಕಾಲುಗಳಿಗೆ ಬೆಲ್ಟ್ ಕಟ್ಟಿ ಕಬ್ಬಿಣದ ಮ್ಯಾಟ್ ಮೇಲೆ ಮಲಗಿಸಿ ಕ್ರೇನ್ ಮೂಲಕ ನಾಲೆಯಿಂದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆತ್ತಿದ್ದಾರೆ.
ಸುರಕ್ಷಿತವಾಗಿ ಮೇಲೆತ್ತಿ ಲಾರಿ ಮೂಲಕ ಸ್ಥಳಾಂತರಿಸಿದ್ದಾರೆ. ಸದ್ಯ ಕಾಡಾನೆಗೆ ಚಿಕಿತ್ಸೆ ನೀಡಿ ಹಲಗೂರು ಅರಣ್ಯ ಪ್ರದೇಶಕ್ಕೆ ಅರಣ್ಯ ಸಿಬ್ಬಂದಿ ಬಿಟ್ಟಿದ್ದಾರೆ. ಆ ಮೂಲಕ ಕಾಡಾನೆ ರಕ್ಷಣಾ ಕಾರ್ಯಾಚರಣೆ ಯಶಸ್ವಿ ಆಗಿದೆ.
ಅರಣ್ಯ ಇಲಾಖೆ ಸಾಹಸಕ್ಕೆ ಮೆಚ್ಚುಗೆ
ಇನ್ನು ನಾಲೆಗೆ ಬಿದ್ದ ಕಾಡಾನೆ ರಕ್ಷಿಸಿದ ಅರಣ್ಯ ಇಲಾಖೆ ಕಾರ್ಯಾಚರಣೆ ಮೆಚ್ಚುಗೆಗೆ ಪಾತ್ರವಾಗಿದೆ.
ಈಶ್ವರ್ ಖಂಡ್ರೆ ಮಾಹಿತಿ
ಇನ್ನುಅರಣ್ಯಾಧಿಕಾರಿಗಳ ಕಾಡಾನೆ ಕಾರ್ಯಾಚರಣೆ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದರು. 'ಮಂಡ್ಯ ಜಿಲ್ಲೆಯಲ್ಲಿ ಕಾಲುವೆಗೆ ಬಿದ್ದಿದ್ದ ಗಂಡು ಆನೆಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಭಿನಂದಿಸುತ್ತೇವೆ ಎಂದರು.
ಅಂತೆಯೇ ಅರಣ್ಯ ಸಿಬ್ಬಂದಿ ಕಠಿಣ ಪರಿಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಿ ಆನೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದರು. ಶಿವನಸಮುದ್ರ ಕಾಲುವೆಯಲ್ಲಿ ಆನೆ ಸಿಲುಕಿಕೊಂಡಿದೆ ಎಂಬ ಮಾಹಿತಿ ಬಂದ ತಕ್ಷಣ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಕರೆ ಮಾಡಿ ಆನೆಯನ್ನು ರಕ್ಷಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು.
ಅರವಳಿಕೆ ನೀಡಿ ಆನೆ ಪ್ರಜ್ಞೆ ತಪ್ಪಿದ ನಂತರ, ಕ್ರೇನ್ ಬಳಸಿ ಕಾಲುವೆಯಿಂದ ಮೇಲಕ್ಕೆತ್ತಿ ರಕ್ಷಿಸಲಾಯಿತು. ಆನೆಗೆ ಪ್ರಜ್ಞೆ ಮರಳಲು ರಿವರ್ಸ್ ಡಾರ್ಟ್ ನೀಡಲಾಯಿತು. ನಂತರ ಅದನ್ನು ಕಾಡಿಗೆ ಬಿಡಲಾಗುತ್ತದೆ ಎಂದು ಅವರು ಹೇಳಿದರು.