ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಈ ವಿಷಯವನ್ನು ಅವರ ಬಳಿ ಪ್ರಸ್ತಾಪಿಸಿದ ನಂತರವೇ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ತಿಳಿಸಿದ್ದಾರೆ.
ಅಕ್ಟೋಬರ್‌ನಿಂದ ಪ್ರಾರಂಭವಾಗುವ 2025-26ರ ಸಕ್ಕರೆ ಮಾರುಕಟ್ಟೆ ವರ್ಷದಲ್ಲಿ ಕೇಂದ್ರ ಸರ್ಕಾರವು 15 ಲಕ್ಷ ಟನ್ ಸಕ್ಕರೆ ರಫ್ತಿಗೆ ಅನುಮತಿ ನೀಡಿದೆ ಮತ್ತು ಕೈಗಾರಿಕೆಗಳು ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಹೆಚ್ಚಿಸುವಂತೆ ಬೇಡಿಕೆ ಸಲ್ಲಿಸಿದ್ದು, ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಕೇಂದ್ರ ಆಹಾರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಂಗಳವಾರ ಹೇಳಿದ್ದಾರೆ.
2019ರ ಫೆಬ್ರುವರಿಯಿಂದ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯು ಕೆಜಿಗೆ 31 ರೂ. ಇದೆ. ಅಂದಿನಿಂದ ಈ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಉತ್ಪಾದನಾ ವೆಚ್ಚ ಹೆಚ್ಚಳವಾಗಿದ್ದು, ಪ್ರತಿ ಕೆಜಿ ಸಕ್ಕರೆ ಬೆಲೆಯನ್ನು 40 ರೂಪಾಯಿಗೆ ಹೆಚ್ಚಿಸುವಂತೆ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಒಕ್ಕೂಟ (ಐಎಸ್ಎಂಎ) ಸರ್ಕಾರಕ್ಕೆ ಮನವಿ ಮಾಡಿದೆ.
'ಜೋಶಿ (ಕೇಂದ್ರ ಸರ್ಕಾರ) ಅದನ್ನು (ಸಕ್ಕರೆಯ ಕನಿಷ್ಠ ಮಾರಾಟ ಬೆಲೆ) ಕೆಜಿಗೆ 31 ರೂ.ಗಳಿಂದ 40 ರೂ.ಗಳಿಗೆ ಹೆಚ್ಚಿಸುವ ಬಗ್ಗೆ ಪರಿಗಣಿಸುವುದಾಗಿ ಹೇಳಿದ್ದಾರೆ. ನಾನು ಪ್ರತಿ ಕೆಜಿ ಸಕ್ಕರೆಗೆ 41 ರೂ. ಕೇಳಿದ್ದೆ. ನಾನು (ಪ್ರಧಾನಿ) ಅವರನ್ನು ಭೇಟಿಯಾಗಿ ವಿನಂತಿಸಿದ ನಂತರ ಅವರು ಈ ಕ್ರಮ ಕೈಗೊಂಡಿದ್ದಾರೆ' ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಕ್ಕರೆ ಕಾರ್ಖಾನೆಗಳು ಬೆಲೆ ಏರಿಕೆ ಅಗತ್ಯತೆಯ ಬಗ್ಗೆ ಸಿಎಂ ಮತ್ತು ನನ್ನ ಮುಂದೆ ಬೇಡಿಕೆ ಇಟ್ಟಿವೆ. ಕಳೆದ ಬಾರಿ ಬೆಲೆ ಏರಿಕೆಯಾಗಿ ಏಳೆಂಟು ವರ್ಷಗಳಾಗಿವೆ. ಆದ್ದರಿಂದ ನಾವು ಪ್ರಧಾನಿಗೆ ಈ ಬಗ್ಗೆ ವಿನಂತಿಸಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
'ರೈತರು ಮತ್ತು ಕಾರ್ಖಾನೆಗಳು ಇಬ್ಬರೂ ಪ್ರಯೋಜನ ಪಡೆಯಬೇಕು. ಕಾರ್ಖಾನೆಗಳು ಇದ್ದರೆ, ರೈತರು ಇರುತ್ತಾರೆ ಮತ್ತು ಅದೇ ರೀತಿ, ರೈತರು ಇದ್ದರೆ, ಕಾರ್ಖಾನೆಗಳು ಇರುತ್ತವೆ. ಆದ್ದರಿಂದ ನಮ್ಮ ಕಡೆಯಿಂದಲೂ ಸಕ್ಕರೆ ಬೆಲೆಯನ್ನು ಹೆಚ್ಚಿಸಬೇಕೆಂಬ ಬೇಡಿಕೆ ಇತ್ತು. ಏಕೆಂದರೆ ಕೇಂದ್ರವು ಕಾರ್ಖಾನೆಗಳು ಎತ್ತಿರುವ ಸಮಸ್ಯೆಗಳಾದ ಕಬ್ಬು, ಕಾಕಂಬಿ, ವಿದ್ಯುತ್, ಬ್ಯಾಂಕ್‌ಗಳಿಂದ ಬಡ್ಡಿದರವನ್ನು ಆಧರಿಸಿ ನಿರ್ಧರಿಸುತ್ತದೆ. ನ್ಯಾಯ ಒದಗಿಸುವಂತೆ ನಾವು ಕೇಂದ್ರವನ್ನು ವಿನಂತಿಸಿದ್ದೆವು' ಎಂದು ಅವರು ಹೇಳಿದರು.
ಪ್ರಲ್ಹಾದ ಜೋಶಿ ಅವರ ಹೇಳಿಕೆಗೆ ಸಂತೋಷ ವ್ಯಕ್ತಪಡಿಸಿದ ಅವರು, 'ಅವರು (ಜೋಶಿ) ಕೂಡ (ಪರಿಸ್ಥಿತಿ) ಅರ್ಥಮಾಡಿಕೊಂಡಿದ್ದಾರೆ' ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ, ಕಬ್ಬು ಬೆಲೆ ನಿಗದಿ, ಪ್ರವಾಹ ಪರಿಹಾರ ಹಾಗೂ ಪ್ರಮುಖ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಬೇಡಿಕೆ ಈಡೇರಿಸಲು ಮನವಿ ಪತ್ರ ಸಲ್ಲಿಸಿದ್ದಾರೆ.
ಕರ್ನಾಟಕದಲ್ಲಿ ಕಬ್ಬು ಬೆಳೆಗಾರರು ಕಬ್ಬಿಗೆ ದರ ನಿಗದಿ ಮಾಡುವಂತೆ ತೀವ್ರ ಪ್ರತಿಭಟನೆ ನಡೆಸಿದ ನಂತರ ಮುಖ್ಯಮಂತ್ರಿ ಪ್ರಧಾನಿಯವರ ಭೇಟಿಗೆ ಸಮಯ ಕೋರಿದ್ದರು.
ರೈತರು ಮತ್ತು ಖಾರ್ಖಾನೆ ಮಾಲೀಕರೊಂದಿಗೆ ಸರಣಿ ಚರ್ಚೆಯ ನಂತರ, ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಈ ಆದೇಶದ ಪ್ರಕಾರ, ರೈತರಿಗೆ ಪ್ರತಿ ಟನ್‌ಗೆ ಹೆಚ್ಚುವರಿಯಾಗಿ 100 ರೂ.ಗಳನ್ನು ಪಾವತಿಸಲು ಈ ಪೈಕಿ ರಾಜ್ಯವು ಅರ್ಧದಷ್ಟು ಮತ್ತು ಕರ್ಖಾನೆಗಳು ಅರ್ಧ ಪಾವತಿಸುವಂತೆ ತೀರ್ಮಾನಿಸಲಾಯಿತು. ಇದರ ಆಧಾರದ ಮೇಲೆ ಪ್ರತಿ ಟನ್ ಕಬ್ಬಿಗೆ 3,200 ರೂ.ಗಳಿಂದ 3,300 ರೂ.ಗಳ ನಿವ್ವಳ ಕಬ್ಬಿನ ಬೆಲೆಯನ್ನು ಖಚಿತಪಡಿಸಿತು.