ಬೆಂಗಳೂರು: ಬಳ್ಳಾರಿಯಲ್ಲಿ "ಜೀನ್ಸ್ ಪಾರ್ಕ್" ಮಾಡುತ್ತೇವೆ, ಬಳ್ಳಾರಿಯನ್ನು "ಜೀನ್ಸ್ ರಾಜಧಾನಿ" ಮಾಡುತ್ತೇವೆಂದು ಹೇಳಿದ್ದ ಕಾಂಗ್ರೆಸ್ ಸರ್ಕಾರ, ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.
ಸುಳ್ಳು ಬುರುಕ ರಾಹುಲ್ ಗಾಂಧಿ, ಜೀನ್ಸ್ ಪಾರ್ಕ್ ಎಲ್ಲಪ್ಪ? ಎಂದು ಪ್ರಶ್ನಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಳ್ಳಾರಿಯಲ್ಲಿ "ಜೀನ್ಸ್ ಪಾರ್ಕ್" ಮಾಡುತ್ತೇವೆ, ಬಳ್ಳಾರಿಯನ್ನು "ಜೀನ್ಸ್ ರಾಜಧಾನಿ" ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ ಈಗ ಸರಿಯಾದ ಮೂಲಸೌಕರ್ಯವಿಲ್ಲದೆ 36 ಜೀನ್ಸ್ ತಾರರಿಕಾ ಘಟಕಗಳು ಮುಚ್ಚುವ ಪರಿಸ್ಥಿತಿ ತಂದಿಟ್ಟಿದೆ. ಇದರಿಂದ 2 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಾಗಿದೆ.
ರಾಹುಲ್ ಅವರೇ, ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾದರೂ ಇನ್ನೂ take off ಆಗದ ನಿಮ್ಮ ಕಾಂಗ್ರೆಸ್ ಸರ್ಕಾರವನ್ನ ಈಗಲಾದರೂ ಎಬ್ಬಿಸದಿದ್ದರೆ ನಿಮ್ಮ ಪಕ್ಷಕ್ಕೆ ಬಿಹಾರದಲ್ಲಿ ಬಂದ ಗತಿಯೇ ಕರ್ನಾಟಕದಲ್ಲೂ ಬರುವುದು ನಿಶ್ಚಿತ ಎಂದು ಎಚ್ಚರಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರೇ, ಜೀನ್ಸ್ ಪಾರ್ಕ್ ನಿರ್ಮಾಣಕ್ಕೆ ಬೇಕಾದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಿ. ಜೀನ್ಸ್ ಪಾರ್ಕ್ ನಿರ್ಮಾಣವಾಗಿ ಜೀನ್ಸ್ ತಯಾರಿಕಾ ಘಟಕಗಳಿಗೆ ಅಗತ್ಯವಾದ STP ಗಳು ಇದ್ದಿದ್ದರೆ, ಹೀಗೆ ರಾತ್ರೋರಾತ್ರಿ ಘಟಕಗಳನ್ನು ಮುಚ್ಚುವ ಪರಿಸ್ಥಿತಿ ಬರುತ್ತಿರಲಿಲ್ಲ. ಏಳಿ ಸ್ವಾಮಿ, ಎದ್ದೇಳಿ. ಕರ್ನಾಟಕವನ್ನು ಉಳಿಸಿ ಎಂದು ಹೇಳಿದ್ದಾರೆ.