ಬೆಂಗಳೂರು: ಈ ಹಿಂದೆ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಶೇ.50ರಷ್ಟು ಟ್ರಾಫಿಕ್ ದಂಡ ರಿಯಾಯಿತಿ ಇದೀಗ ಮತ್ತೆ ಜಾರಿಗೆ ತರುವ ಕುರಿತು ರಾಜ್ಯದ ಕಾಂಗ್ರೆಸ್ ಸರ್ಕಾರ ಮಹತ್ತರ ಘೋಷಣೆ ಮಾಡಿದೆ.
ಹೌದು.. ಕರ್ನಾಟಕ ಸರ್ಕಾರವು ವಾಹನ ಸವಾರರಿಗೆ ಬಾಕಿ ಇರುವ ಸಂಚಾರ ದಂಡದ (traffic violation fines) ಮೇಲೆ ಶೇ.50 ರಿಯಾಯಿತಿ ಘೋಷಿಸಿದೆ. ಈ ಸಂಬಂಧ ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ರಂಗಪ್ಪ ಕರಿಗಾರ ಅವರು ಇಂದು (ನವೆಂಬರ್ 20) ಅಧಿಕೃತ ಆದೇಶ ಹೊರಡಿಸಿದ್ದಾರೆ.
ಸಂಚಾರ ದಂಡ ರಿಯಾಯಿತಿ ಕುರಿತಂತೆ ಸಾರಿಗೆ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿದ ಬಳಿಕ, ಸರ್ಕಾರವು ಅದನ್ನು ಅಂಗೀಕರಿಸಿ ತಕ್ಷಣ ಜಾರಿಗೆ ತರಲು ಆದೇಶ ಹೊರಡಿಸಿದೆ. ಕಳೆದ ಬಾರಿ ದಂಡ ರಿಯಾಯಿತಿ ನೀಡಿದಾಗ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಹರಿದುಬಂದಿತ್ತು.
ಈ ಹಿನ್ನೆಲೆಯಲ್ಲಿ ಇದೀಗ ಮತ್ತೊಮ್ಮೆ ಈ ಆಫರ್ ನೀಡಲಾಗಿದ್ದು, ಸರ್ಕಾರದ ಆದೇಶದಂತೆ ನಾಳೆಯಿಂದಲೇ ಅಂದರೆ ನವೆಂಬರ್ 21ದಿಂದಲೇ ರಾಜ್ಯದಾದ್ಯಂತ 50% ದಂಡ ರಿಯಾಯಿತಿ ಯೋಜನೆ ಜಾರಿಗೆ ಬರಲಿದ್ದು, ಈ ವಿಶೇಷ ಅವಕಾಶ ಡಿಸೆಂಬರ್ 12 ರವರೆಗೆ ಮಾತ್ರ ಲಭ್ಯವಿರಲಿದೆ. ಚಾಲಕರು ಈ ಅವಧಿಯೊಳಗೆ ತಮ್ಮ ಬಾಕಿ ಇರುವ ಸಂಚಾರ ದಂಡಗಳನ್ನು 50% ರಿಯಾಯಿತಿಯಲ್ಲಿ ಪಾವತಿಸಬಹುದು.
ಯಾವಾಗಿಂದ ಜಾರಿ?
ಶೇ.50ರಷ್ಟು ದಂಡ ರಿಯಾಯಿತಿ ಸೌಲಭ್ಯವು ನಾಳೆಯಿಂದ ಅಂದರೆ ನವೆಂಬರ್ 21 ರಿಂದ ಡಿಸೆಂಬರ್ 12 ರವರೆಗೆ ಜಾರಿಯಲ್ಲಿರಲಿದ್ದು, ಈ ಅವಧಿಯಲ್ಲಿ ಚಾಲಕರು ತಮ್ಮ ಬಾಕಿ ದಂಡವನ್ನು ಅರ್ಧ ಮೊತ್ತಕ್ಕೆ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು.
ಎಲ್ಲೆಲ್ಲಿ ದಂಡ ಕಟ್ಟಬಹುದು?
ದಂಡ ಪಾವತಿ ಉಳಿಸಿಕೊಂಡಿರುವ ವಾಹನ ಸವಾರರು ಬೆಂಗಳೂರಿನಲ್ಲಿ ಸಂಚಾರ ಪೊಲೀಸ್ ಠಾಣೆಗಳು, ಸಂಚಾರ ನಿರ್ವಹಣಾ ಕೇಂದ್ರ, ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ವೆಬ್‌ಸೈಟ್‌ಗಳಲ್ಲಿ ವಿವರ ಪಡೆದು ಪಾವತಿಸಬಹುದು. ಜಿಲ್ಲೆಗಳಲ್ಲಿ ಸಮೀಪದ ಪೊಲೀಸ್ ಠಾಣೆಗಳಿಗೆ ಖುದ್ದು ಭೇಟಿ ನೀಡಿ ರಿಯಾಯಿತಿ ದರದಲ್ಲಿ ದಂಡ ಕಟ್ಟಬಹುದಾಗಿದೆ.
ಇನ್ನು ಆನ್‌ಲೈನ್ ಮೂಲಕ ಪಾವತಿ ಮಾಡುವವರು ಕರ್ನಾಟಕ ಸ್ಟೇಟ್ ಪೊಲೀಸ್ (ಕೆಎಸ್‌ಪಿ) ಆ್ಯಪ್ ಬಿಟಿಪಿ ಅಸ್ತ್ರಂ ಮುಖಾಂತರವೂ ಖುದ್ದಾಗಿ ದಂಡ ಪಾವತಿಸಬಹುದಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.