ಹುಬ್ಬಳ್ಳಿ: ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ತತ್ವಗಳನ್ನು ಗಾಳಿಗೆ ತೂರಿ ಎನ್‌ಡಿಎ ಗೆಲುವು ಕಂಡಿದೆ. ಪ್ರಧಾನಿಯೇ ಈ ರೀತಿ ಗೆಲ್ಲುವಲ್ಲಿ ಮುಂದಾದರೆ, ಇತರ ಪಕ್ಷಗಳು ಏನು ಮಾಡುತ್ತವೆ? ಮೋಸದಿಂದ ಚುನಾವಣೆ ಗೆಲ್ಲುವಂತಹ ಪ್ರಧಾನಿಯನ್ನು ಎಲ್ಲೂ ನೋಡಿಲ್ಲ ಎಂದು ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರ ಚುನಾವಣೆ ವೇಳೆ ದೆಹಲಿಯಲ್ಲಿ ಬಾಂಬ್ ಬ್ಲಾಸ್ಟ್ ಆಗುತ್ತೆ. ದೆಹಲಿ ಸ್ಫೋಟ ಆದಾಗ ಪ್ರಧಾನಿ ಎಲ್ಲಿದ್ದರು. ದುರ್ಘಟನೆ ಸಂಭವಿಸಿದ ಕೂಡಲೇ ಮೋದಿ ವಾಪಸ್ ಬರಬಹುದಿತ್ತು. ಆದರೆ ಭೂತನ್ ರಾಜನ ಹುಟ್ಟುಹಬ್ಬ ಮುಗಿಸಿ ಬಂದಿದ್ದಾರೆ ಎಂದು ಟೀಕಿಸಿದರು.
ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸುವ ಉದ್ದೇಶವಿದ್ದರೆ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಿಂದ ದೂರವಿಡಲು ಮೋದಿ ಸರ್ಕಾರ ಏಕೆ ಕಾನೂನನ್ನು ಜಾರಿಗೆ ತಂದಿತು ಎಂದು ಲಾಡ್ ಪ್ರಶ್ನಿಸಿದರು.
ಪ್ರಮುಖ ಪಕ್ಷಗಳು ಪಡೆದ ಮತ ಹಂಚಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಲಾಡ್, ಆರ್‌ಜೆಡಿ 143 ಸ್ಥಾನಗಳಲ್ಲಿ ಸ್ಪರ್ಧಿಸುವ ಮೂಲಕ ಕೇವಲ 25 ಸ್ಥಾನಗಳನ್ನು ಗೆಲ್ಲಲು ಶೇ. 23 ರಷ್ಟು ಗಳಿಸಿದೆ, ಬಿಜೆಪಿ ಶೇ.20 ರಷ್ಟು ಮತ ಹಂಚಿಕೆಯನ್ನು ಪಡೆಯುವ ಮೂಲಕ 90 ಸ್ಥಾನಗಳನ್ನು ಗೆದ್ದಿದೆ ಎಂದು ಹೇಳಿದರು.
20 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಒಂದು ಪಕ್ಷವು ಸ್ಪರ್ಧಿಸಿದ 100 ಸ್ಥಾನಗಳಲ್ಲಿ 90 ಸ್ಥಾನಗಳನ್ನು ಹೇಗೆ ಗೆಲ್ಲಲು ಸಾಧ್ಯ? ಎಂದು ಅವರು ಪ್ರಶ್ನಿಸಿದರು. ಎಲ್‌ಜೆಪಿ (ರಾಮ್ ವಿಲಾಸ್) ಯ ಕಾರ್ಯಕ್ಷಮತೆಯ ಬಗ್ಗೆಯೂ ಲಾಡ್ ಸಂಶಯ ವ್ಯಕ್ತಪಡಿಸಿದರು.
ಚುನಾವಣಾ ಆಯೋಗ ಬಿಜೆಪಿ ಅಣತಿಯಂತೆ ಕೆಲಸ ಮಾಡಿದೆ. ಪೋಸ್ಟಲ್ ಬ್ಯಾಲೆಟ್‌ನಲ್ಲಿ ಮಹಾಘಟ ಬಂಧನ್‌ಗೆ ಮುನ್ನಡೆ ಸಿಕ್ಕಿತ್ತು. ಆದರೆ ಇವಿಎಂ ನಲ್ಲಿ ಎನ್‌ಡಿಎ ಗೆಲುವು ಸಾಧಿಸಿದೆ. ಅಲ್ಲಿನ ಗೋಲ್ ಮಾಲ್ ಗೆ ಚುನಾವಣೆಯ ಅಂಕಿ ಅಂಶ ಗಳೇ ಸಾಕ್ಷಿ ಎಂದು ವಾಗ್ದಾಳಿ ನಡೆಸಿದರು.