ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಸ್ವಚ್ಛತೆಗಾಗಿ 613 ಕೋಟಿ ರೂ.ವೆಚ್ಚದಲ್ಲಿ ಬಾಡಿಗೆ ಯಂತ್ರ ಪಡೆಯುವ ರಾಜ್ಯ ಸರ್ಕಾರದ ನಿರ್ಧಾರವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಮರ್ಥಿಸಿಕೊಂಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತ ಎಂ ಮಹೇಶ್ವರ ರಾವ್ ಅವರು, ಹಲವಾರು ಸಭೆಗಳನ್ನು ನಡೆಸಿದ ನಂತರ ಕಸ ಗುಡಿಸುವ ಯಂತ್ರ ಖರೀದಿಸುವ ಬದಲು ಬಾಡಿಗೆಗೆ ಪಡೆಯುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಕಸ ಗುಡಿಸುವ ಯಂತ್ರ ಖರೀದಿ ಮಾಡಬೇಕೇ ಅಥವಾ ಬಾಡಿಗೆ ಪಡೆಯಬೇಕೇ ಎಂಬ ಬಗ್ಗೆ ಒಂದು ವರ್ಷ ಅಧ್ಯಯನ ನಡೆಸಿ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾಪವನೆಗೆ ಸಂಪುಟ ಅನುಮೋದನೆ ನೀಡಿದೆ. ಇದೀಗ ಟೆಂಡರ್ ಆಹ್ವಾನಿಸಲಾಗುವುದು. ಪ್ರಸ್ತಾವನೆಯಲ್ಲಿ ಅಂದಾಜು ವೆಚ್ಚದ ಲೆಕ್ಕಾಚಾರ ಸಲ್ಲಿಸಲಾಗಿದೆ.
ಬಾಡಿಗೆ ಪಡೆಯುವ ಕುರಿತು ಸರ್ಕಾರಕ್ಕೂ ಸ್ಪಷ್ಟೀಕರಣ ನೀಡಲಾಗಿದೆ. ಸಿಬ್ಬಂದಿ, ಯಂತ್ರ ನಿರ್ವಹಣೆ ವೆಚ್ಚ ಗಮನಿಸಿ ಬಾಡಿಗೆ ಪಡೆಯಲಾಗುತ್ತಿದೆ. ಟೆಂಡರ್ ನಲ್ಲಿ ಉತ್ತಮ ದರ ನಿಗದಿಪಡಿಸಿದವರಿಗೆ ಗುತ್ತಿಗೆ ನೀಡಲಾಗುವುದು. ಜಿಎಸ್'ಟಿ ಶೇ.18ರಷ್ಟು ನಿಗದಿಪಡಿಸಲಾಗಿದೆ. ಜಿಎಸ್'ಟಿ ವೆಚ್ಚ ಕಡಿಮೆಯಾದರೆ, ಸುಮಾರು ರೂ.100 ಕೋಟಿ ಉಳಿತಾಯವಾಗಲಿದೆ ಎಂದು ಮಾಹಿತಿ ನೀಡಿದರು.
ಯಂತ್ರ ಬಾಡಿಗೆ ಪಡೆಯುವ ಲೆಕ್ಕಚಾರ ಹಾಗೂ ಖರೀದಿ ಮಾಡಿ ನಿರ್ವಹಣೆ ಮಾಡಿದ ವೆಚ್ಚದ ಲೆಕ್ಕಾಚಾರವನ್ನು ವೆಬ್'ಸೈಟ್'ನಲ್ಲಿ ಪ್ರಕಟಿಸುವ ಮೂಲಕ ಸಾರ್ವಜನಿಕರಿಗೆ ವಿವರಣೆ ನೀಡಲಾಗುವುದು. ಜನರು ಸಲ್ಲಿಸುವ ಅಭಿಪ್ರಾಯ, ಅಂಶಗಳನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರು.