ಬೆಂಗಳೂರು: ರಾಜ್ಯದ ಟೈಯರ್-2 ಮತ್ತು ಟೈಯರ್-3 ನಗರಗಳಲ್ಲಿ ತಾಂತ್ರಿಕ ಮೂಲಸೌಕರ್ಯ ಅಭಿವೃದ್ಧಿಯತ್ತ ಸರ್ಕಾರ ಗಮನಹರಿಸುತ್ತಿದೆ ಎಂದು ಐಟಿ/ಬಿಟಿ ಕಾರ್ಯದರ್ಶಿ ಡಾ. ಮಂಜುಳಾ ಎನ್ ಅವರು ಶುಕ್ರವಾರ ಹೇಳಿದರು.
ನಗರದ ಬಿಐಇಸಿಯಲ್ಲಿ ಗುರುವಾರ ಮುಕ್ತಾಯಗೊಂಡ 3 ದಿನಗಳ ಬೆಂಗಳೂರು ಟೆಕ್ ಸಮ್ಮಿಟ್'ನ ಸಮಾರೋಪದಲ್ಲಿ ಕೃಷಿಕಲ್ಪ ಫೌಂಡೇಶನ್ ಸಿಇಒ ಸಿಎಂ ಪಾಟೀಲ್ ಮತ್ತು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಿಇಒ ಸಂಜೀವ್ ಕುಮಾರ್ ಗುಪ್ತಾ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡ ಐಟಿ/ಬಿಟಿ ಕಾರ್ಯದರ್ಶಿ ಡಾ. ಮಂಜುಳಾ ಅವರು, ನಾವೀನ್ಯತೆಯ ಶಕ್ತಿಕೇಂದ್ರವಾಗುವ ಭಾರತದ ಪ್ರಯಾಣದಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸುವಂತೆ ಮಾಡುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.
ಇದೇ ವೇಳೆ ಜಗತ್ತಿನ ನೈಜ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ ಎಂದ ಅವರು, ರಾಜ್ಯ ಸರ್ಕಾರದ ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ (ಲೀಪ್)ಗಳನ್ನು ಕುರಿತು ವಿವರಿಸಿದರು.
ಮೈಸೂರು, ಹುಬ್ಬಳ್ಳಿ ಮುಂತಾದ ನಗರಗಳಲ್ಲಿ ಬೆಂಗಳೂರಿನ ತಂತ್ರಜ್ಞಾನ ವ್ಯವಸ್ಥೆಯನ್ನು ಪುನರಾವರ್ತಿಸಲು ಸರ್ಕಾರ 1,000 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ರಾಜ್ಯ ಸರ್ಕಾರವು ಆರಂಭಿಕ ಹಂತದ ಹಣಕಾಸಿನ ಅಗತ್ಯವನ್ನು ಅರ್ಥಮಾಡಿಕೊಂಡಿದ್ದು, ನಮ್ಮ ಕಾರ್ಯಕ್ರಮವು ಅರ್ಹ ನವೋದ್ಯಮಗಳಿಗೆ 50 ಲಕ್ಷ ರೂ.ಗಳವರೆಗೆ ಅನುದಾನವನ್ನು ಒದಗಿಸುತ್ತದೆ ಎಂದು ಹೇಳಿದರು.