2023ರಲ್ಲಿ ಸರ್ಕಾರ ರಚನೆಯ ವೇಳೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವಿನ 'ಅಧಿಕಾರ ಹಂಚಿಕೆ' ಒಪ್ಪಂದದಂತೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದೆ ಎನ್ನುವ ಊಹಾಪೋಹಗಳ ನಡುವೆ ಆಡಳಿತ ಪಕ್ಷದೊಳಗಿನ ಜಗಳ ತೀವ್ರಗೊಂಡಿದೆ. ಮುಖ್ಯಮಂತ್ರಿಯಾಗಿ ನಾನೇ ಮುಂದುವರಿಯಬೇಕೆಂದು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದರೆ ನಾನು ಮುಂದುವರಿಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಾಯಕತ್ವ ಬದಲಾವಣೆಯ ಬಗ್ಗೆ ಹೈಕಮಾಂಡ್ ಅಂತಿಮವಾಗಿ ನಿರ್ಧರಿಸುತ್ತದೆ. ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ, ನಾನು ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದರು. ಇದಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್, “ಅವರು ಹೇಳಿದ ಮೇಲೆ ಅದೇ ನಮಗೆ ವೇದವಾಕ್ಯ” ಎಂದು ಪ್ರತಿಕ್ರಿಯಿಸಿದರು. ಈಮಧ್ಯೆ, ಕಾಂಗ್ರೆಸ್ ಪಕ್ಷದಲ್ಲಿ ಅವರ ಶಾಸಕರನ್ನ ಅವರೇ ಖರೀದಿ ಮಾಡಲು 100 ಕೋಟಿಗೆ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಮಾಡಿರುವ ಲೇವಡಿ ಕುರಿತು, ಮುಖ್ಯಮಂತ್ರಿ ಹುದ್ದೆಗೆ ಎಷ್ಟು ಹಣ ನೀಡಬೇಕಾಗಿತ್ತು, ಮಂತ್ರಿ ಹುದ್ದೆಗೆ ಎಷ್ಟು ಹಣ ನೀಡಲಾಗಿದೆ ಎಂದು ಬಿಜೆಪಿ ಪಕ್ಷದ ನಾಯಕರೇ ಬಹಿರಂಗ ಹೇಳಿಕೆ ನೀಡಿದ್ದಾರೆ. ಅವರು ಎಷ್ಟು ಹಣ ಆಮೀಷ ಒಡ್ಡಿದ್ದರು ಎಂದು ವಿಧಾನಸಭೆಯಲ್ಲೂ ಪ್ರಸ್ತಾಪವಾಗಿದ್ದು, ದಾಖಲೆಗಳಲ್ಲಿ ಸೇರಿವೆ ಎಂದು ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.
ಡಿಕೆ ಶಿವಕುಮಾರ್ ಅವರನ್ನು ಎರಡುವರೆ ವರ್ಷದ ಅವಧಿಗೆ ಸಿಎಂ ಮಾಡಬೇಕೆಂದು ಅವರ ಬೆಂಬಲಿಗರು ದೆಹಲಿ ಪರೇಡ್ ನಡೆಸಿದ್ದಾರೆ. ಈಗಾಗಲೇ ಡಿಕೆಶಿ ಬಣ ಎರಡು ತಂಡಗಳಾಗಿ ದೆಹಲಿಯಲ್ಲೇ ಬೀಡುಬಿಟ್ಟಿದ್ದು, ಹೈಕಮಾಂಡ್ ನಾಯಕರ ಭೇಟಿಗೆ ಕಸರತ್ತು ನಡೆಸಿವೆ. ಈಮಧ್ಯೆ, ಡಿಕೆ ಶಿವಕುಮಾರ್ ಭೇಟಿಗೆ ರಾಹುಲ್ ಗಾಂಧಿ ಸಮಯ ಕೊಟ್ಟಿಲ್ಲ. ಆದರೆ ಬಿಕೆ ಹರಿಪ್ರಸಾದ್ ಸೈಲೆಂಟ್ ಆಗಿಯೇ ರಾಹುಲ್ ಗಾಂಧಿಯನ್ನು ಭೇಟಿ ಮಾಡಿರುವ ವಿಷಯ ಈಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕರ್ನಾಟಕ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳ ಬಗ್ಗೆ ರಾಹುಲ್ ಗಾಂಧಿ, ಹರಿಪ್ರಸಾದ್ ಅವರಿಂದ ಸಂಪೂರ್ಣವಾಗಿ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಅತಿವೇಗದಿಂದ ಬಂದ ಕಾರೊಂದು ಫ್ಲೈಓವರ್ ಪಕ್ಕದ ತಡೆಗೋಡೆಗೆ ಡಿಕ್ಕಿ ಹೊಡೆದು, ಅಂಡರ್‌ಪಾಸ್‌ಗೆ ಉರುಳಿ ಬಿದ್ದ ಪರಿಣಾಮ ಶಬರಿಮಲೆಗೆ ತೆರಳುತ್ತಿದ್ದ ನಾಲ್ವರು ಯಾತ್ರಿಕರು ಸಾವಿಗೀಡಾಗಿರುವ ಘಟನೆ ಕೋಲಾರದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ. ಮೃತರೆಲ್ಲರೂ ಸ್ನೇಹಿತರಾಗಿದ್ದು ಚೆನ್ನೈ ಮೂಲದ ಗೋಪಿ, ಗೌತಮ್ ರಮೇಶ್, ಹರಿಹರನ್ ಮತ್ತು ಜಯಂಕರ್ ಎಂದು ಗುರುತಿಸಲಾಗಿದೆ. ಮತ್ತೊಂದೆಡೆ, ಬೆಂಗಳೂರಿನ ಚಿಕ್ಕಬಾಣಾವರ ರೈಲು ನಿಲ್ದಾಣದ ಬಳಿ ಹಳಿ ದಾಟುತ್ತಿದ್ದ ವೇಳೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹರಿದು ಇಬ್ಬರು ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ. ಕೇರಳ ಮೂಲದ ಸ್ಟರ್ಲಿನ್ ಎಲಿಜಾ ಶಾಜಿ ಮತ್ತು ಜಸ್ಟಿನ್ ಜೋಸೆಫ್ ಮೃತಪಟ್ಟಿದ್ದು ನಗರದ ಖಾಸಗಿ ಸಂಸ್ಥೆಯಲ್ಲಿ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದರು.
ಬೆಂಗಳೂರಿನಲ್ಲಿ ನಡೆದ 7 ಕೋಟಿ ರೂಪಾಯಿ ದರೋಡೆ ಪ್ರಕರಣ ಸಂಬಂಧ ಮತ್ತಿಬ್ಬರು ಶಂಕಿತರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಒಟ್ಟಾರೆ ಬಂಧನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ದರೋಡೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದ ಗೋವಿಂದಪುರ ಠಾಣೆಗೆ ಸೇರಿದ ಪೊಲೀಸ್ ಕಾನ್‌ಸ್ಟೆಬಲ್ ಅಣ್ಣಪ್ಪ ನಾಯಕ್ ಅವರನ್ನು ಅಮಾನತುಗೊಳಿಸಲಾಗಿದೆ. ನವೆಂಬರ್ 19ರಂದು ನಡೆದಿದ್ದ ದರೋಡೆ ಪ್ರಕರಣ ಸಂಬಂದ ಅದಾಗಲೇ ಆರು ಮಂದಿಯನ್ನು ಬಂಧಿಸಿದ್ದರು. ಪೊಲೀಸರು ಅವರಿಂದ ಕದ್ದ ಒಟ್ಟು ಮೊತ್ತದಲ್ಲಿ ಈವರೆಗೆ 6.29 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರಲ್ಲಿ ನಗದು ಲಾಜಿಸ್ಟಿಕ್ಸ್ ಕಂಪನಿಯಾದ CMS ಇನ್ಫೋ ಸಿಸ್ಟಮ್ಸ್‌ನ ಮಾಜಿ ಉದ್ಯೋಗಿಗಳು ಸೇರಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಹೇಳಿದ್ದ ಬುರುಡೆ ಕೇಸ್ ಗೆ ಸಂಬಂಧಿಸಿದಂತೆ ಆರೋಪಿ ಚಿನ್ನಯ್ಯಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಚಿನ್ನಯ್ಯಗೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 12 ಷರತ್ತುಗಳನ್ನು ವಿಧಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 1 ಲಕ್ಷ ರೂ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿ ಸೇರಿದಂತೆ 12 ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದ್ದು ಈ ಹಿನ್ನೆಲೆಯಲ್ಲಿ ಚಿನ್ನಯ್ಯ ನಾಳೆ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.