ಬೆಂಗಳೂರು: ಹೆಬ್ಬಾಳ ರಸ್ತೆಯಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಂದಾಗಿದ್ದು, ಹೊಸ ಮೇಲ್ಸೇತುವೆಯೊಂದನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ.
ಎಸ್ಟೀಮ್ ಮಾಲ್ ಜಂಕ್ಷನ್, ಬಳ್ಳಾರಿ ರಸ್ತೆ ಮತ್ತು ಮಾನ್ಯತಾ ಟೆಕ್ ಪಾರ್ಕ್ ಅನ್ನು ಸಂಪರ್ಕಿಸುವ 1.4 ಕಿ.ಮೀ. ಫ್ಲೈಓವರ್ ಅನ್ನು ನಿರ್ಮಿಸಲು ಮುಂದಾಗಿದೆ. ಈ ಯೋಜನೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೆತ್ತಿಕೊಳ್ಳಲಿದೆ.
ವಾಹನಗಳು ಹೊರ ವರ್ತುಲ ರಸ್ತೆ–ಕೆಆರ್ ಪುರಂ ಕಡೆಯಿಂದ (ಮಾನ್ಯತಾ ಟೆಕ್ ಪಾರ್ಕ್ ರಸ್ತೆ) ಹೆಬ್ಬಾಳ ಜಂಕ್ಷನ್‌ಗೆ ಪ್ರವೇಶಿಸದೆ ಎಸ್ಟೀಮ್ ಮಾಲ್ ಬಳಿಯ ಬಳ್ಳಾರಿ ರಸ್ತೆಗೆ ನೇರವಾಗಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 1.4 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣಕ್ಕೆ ಪ್ರಸ್ತಾಪಿಸಿದೆ.
ಈ ಸಂಬಂಧ ಈಗಾಗಲೇ ವಿವಿಧ ಇಲಾಖೆಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಯೋಜನೆಯನ್ನು ಆದಷ್ಟು ಬೇಗ ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಈ ಮಾರ್ಗದಲ್ಲಿ ಪರಿಶೀಲನೆ ನಡೆಸುತ್ತಿದ್ದ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರಿಗೆ ಬಿಡಿಎ ಅಧಿಕಾರಿಗಳು ಈ ಮಾರ್ಗದಲ್ಲಿ ಫ್ಲೈಓವರ್ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಮಹೇಶ್ವರ್ ರಾವ್ ಅವರು, ಹೆಬ್ಬಾಳ ಮೇಲ್ಸೇತುವೆಯಲ್ಲಿ ಹೊಸ "ಲೂಪ್" ನಿರ್ಮಾಣವನ್ನು 15 ದಿನಗಳಲ್ಲಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಕೆ.ಆರ್.ಪುರಂನಿಂದ ನಗರಕ್ಕೆ ಬರುವ ಮೇಲ್ಸೇತುವೆಯ ಕೆಲಸವನ್ನು ಬಿಡಿಎ ಈಗಾಗಲೇ ಪೂರ್ಣಗೊಳಿಸಿದೆ ಮತ್ತು ಸಂಚಾರಕ್ಕೆ ಮುಕ್ತಗೊಳಿಸಿದೆ. ಹೊಸ ಮತ್ತು ಹಳೆಯ ಮೇಲ್ಸೇತುವೆಗಳನ್ನು ಸಂಪರ್ಕಿಸುವ ಲೂಪ್‌ನ ಕೆಲಸ ಪ್ರಗತಿಯಲ್ಲಿದೆ. ಹೊಸ ಮೇಲ್ಸೇತುವೆಗೆ ಈಗಾಗಲೇ ಮೊದಲ ಗಿರ್ಡರ್ ಅನ್ನು ಅಳವಡಿಸಲಾಗಿದೆ. ಕಾಂಕ್ರೀಟ್ ಕೆಲಸ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಈ ವೇಳೆ ಉಳಿದ ಎರಡು ಗಿರ್ಡರ್‌ಗಳನ್ನು ಅಳವಡಿಸುವ ಮೂಲಕ ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ರಾವ್ ಅವರು ಸೂಚನೆ ನೀಡಿದರು.
ಇದೇ ವೇಳೆ ಪಾದಚಾರಿ ಮಾರ್ಗ ಮತ್ತು ರಸ್ತೆ ಡಾಂಬರೀಕರಣ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಳಿಕ ಮಹೇಶ್ವರ್ ರಾವ್ ಅವರು ಹೆಬ್ಬಾಳದ ಆರ್‌ಎಂವಿ 2ನೇ ಹಂತ ಮತ್ತು ಬಸವೇಶ್ವರ ಲೇಔಟ್‌ನ ವಿವಿಧ ಸ್ಥಳಗಳಿಗೆ ಭೇಟಿದರು.
ನಾಗವಾರ ಜಂಕ್ಷನ್ ಬಳಿ ಐಬಿಸ್ ಹೋಟೆಲ್‌ನಿಂದ ನಾಗವಾರ ರಾಜಕಾಲುವೆಯವರೆಗೆ ಒಂದು ಕಿ.ಮೀ ಉದ್ದದಲ್ಲಿ ಜಲಮಂಡಳಿಯು ಒಳಚರಂಡಿ ಪೈಪ್ ಅಳವಡಿಸಬೇಕಿದ್ದು, ಇದಕ್ಕೆ ಉತ್ತರ ಸಂಚಾರ ವಿಭಾಗದಿಂದ ಅನುಮತಿ ದೊರೆತಿದೆ. ಪೂರ್ವ ಸಂಚಾರ ವಿಭಾಗದ ಅನುಮತಿ ಮಾತ್ರ ಬಾಕಿಯಿದೆ ಎಂದು ಅಧಿಕಾರಿಗಳು ತಿಳಿಸಿದರು. ಉತ್ತರ ಭಾಗದಿಂದ ಕೆಲಸ ಪ್ರಾರಂಭಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ಮಹೇಶ್ವರ್ ತಿಳಿಸಿದರು.
ಟ್ಯಾನರಿ ರಸ್ತೆಯಿಂದ ನಾಗವಾರ ಜಂಕ್ಷನ್‌ವರೆಗೆ ರಸ್ತೆ ವಿಸ್ತರಣೆ ಶೀಘ್ರ ಮುಗಿಸಬೇಕು. ಜಂಕ್ಷನ್ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಹಾಕಿರುವ ಡಾಂಬರೀಕರಣ ಪದೇಪದೇ ಹಾಳಾಗುತ್ತಿರುವುದರಿಂದ, ಆ ಭಾಗದಲ್ಲಿ ‘ಎಂ60’ ಕಾಂಕ್ರೀಟ್ ಬಳಸಿ ದುರಸ್ತಿ ಮಾಡಲು ಸೂಚಿಸಿದರು.