ಬೆಂಗಳೂರು: ಮುಖ್ಯಮಂತ್ರಿ ಪಟ್ಟಕ್ಕಾಗಿ ಫೈಟ್ ಮಾಡುತ್ತಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಅನ್ಯಾಯವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘ ಗುರುವಾರ ಕಾಂಗ್ರೆಸ್ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು.
"ವಿಧಾನಸಭೆ ಚುನಾವಣೆಯ ಸಮಯದಲ್ಲಿ, ಶಿವಕುಮಾರ್ ಅವರು ಸಾಕಷ್ಟು ಶ್ರಮಿಸಿದ್ದು, ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಿದ್ದಾರೆ ಮತ್ತು ಅವರ ಪ್ರಯತ್ನದಿಂದಾಗಿ ಕಾಂಗ್ರೆಸ್ 140 ಸ್ಥಾನಗಳನ್ನು ಗಳಿಸಿತು" ಎಂದು ಸಂಘದ ಅಧ್ಯಕ್ಷ ಎಲ್ ಶ್ರೀನಿವಾಸ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಿದ್ದರಾಮಯ್ಯ ಅವರ ಎರಡೂವರೆ ವರ್ಷಗಳ ಅವಧಿ ಪೂರ್ಣಗೊಂಡ ನಂತರ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲಾಗುವುದು ಎಂದು ಕಾಂಗ್ರೆಸ್ ಹೈಕಮಾಂಡ್ ಈ ಹಿಂದೆ ಶಿವಕುಮಾರ್ ಅವರಿಗೆ ಭರವಸೆ ನೀಡಿತ್ತು ಎಂದು ಜನ ಹೇಳುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ತಮ್ಮ ಹಿಂದಿನ ಅವಧಿಯಲ್ಲಿ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರು ಮತ್ತು ಈಗ ಈ ಬಾರಿ ಅವರು ಎರಡೂವರೆ ವರ್ಷ ಪೂರ್ಣಗೊಳಿಸಿದ್ದಾರೆ ಎಂದು ಬೆಂಗಳೂರಿನ ಮಾಜಿ ಉಪಮೇಯರ್ ಶ್ರೀನಿವಾಸ್ ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಶಿವಕುಮಾರ್ ಅವರಿಗೆ ಅಧಿಕಾರವನ್ನು ವರ್ಗಾಯಿಸುತ್ತಾರೆಯೇ ಎಂಬ ಬಗ್ಗೆ ಅನುಮಾನಗಳಿವೆ. ಹೀಗಾಗಿ ಕೆಲವು ಸಚಿವರು ಮತ್ತು ಶಾಸಕರು ದೆಹಲಿ ಪ್ರವಾಸ ಮಾಡುತ್ತಿದ್ದಾರೆ ಎಂದರು.
"ಕಾಂಗ್ರೆಸ್ ಹೈಕಮಾಂಡ್, ಡಿಕೆ ಶಿವಕುಮಾರ್ ಅವರ ಶ್ರಮಕ್ಕೆ ಕನಿಷ್ಠ 'ಕೂಲಿ'(ಪ್ರತಿಫಲ) ನೀಡಬೇಕೆಂದು ನಾವು ವಿನಂತಿಸುತ್ತೇವೆ" ಎಂದು ಸಂಘದ ಅಧ್ಯಕ್ಷರು ಹೇಳಿದರು.
ಶಿವಕುಮಾರ್ ಅವರಿಗೆ ನೀಡಿದ ಭರವಸೆಯನ್ನು ಈಡೇರಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಅನ್ನು ವಿನಂತಿಸಿದ ಶ್ರೀನಿವಾಸ್, ಅವರು ಪಕ್ಷಕ್ಕಾಗಿ ಜೈಲಿಗೂ ಹೋಗಿ ಬಂದಿದ್ದಾರೆ ಎಂದರು.
"ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಆಗಿರುವ ಡಿಕೆ ಶಿವಕುಮಾರ್ ಅವರಿಗೆ ಯಾವುದೇ ಅನ್ಯಾಯವಾಗಬಾರದು. ಶಿವಕುಮಾರ್ ಅವರಿಗೆ ಅನ್ಯಾಯವಾದರೆ ನಾವು ಉಗ್ರ ಹೋರಾಟ ನಡೆಸುತ್ತೇವೆ" ಎಂದು ಒಕ್ಕಲಿಗ ಸಂಘದ ಅಧ್ಯಕ್ಷರು ಹೇಳಿದರು.