ಬೆಂಗಳೂರು: ಬೀದಿ ನಾಯಿಗಳ ಹಾವಳಿ ಕುರಿತು ಸುಪ್ರೀಂಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ ಎಚ್ಚೆತ್ತ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬೀದಿ ನಾಯಿಗಳ ಮಾಹಿತಿಗಳನ್ನು ಸಂಗ್ರಹಿಸಲು ಐದೂ ನಗರ ಪಾಲಿಕೆಗಳು ವಿವಿಧ ಇಲಾಖೆಗಳು ಹಾಗೂ ಸರ್ಕಾರಿ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ಮಾತನಾಡಿ, ರಾಜ್ಯ ಸರ್ಕಾರಿ ಕಚೇರಿ ಆವರಣದಲ್ಲಿರುವ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವುದಾಗಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿರುವ ಐದು ಪಾಲಿಕೆಗಳು ಸರ್ಕಾರಿ ಕಚೇರಿಯ ಆವರಣದಲ್ಲಿ ವಾಸಿಸುವ ಬೀದಿ ನಾಯಿಗಳ ಬಗ್ಗೆ ವಿವರಗಳನ್ನು ನೀಡುವಂತೆ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿವೆ. ಇಲಾಖೆ ಮತ್ತು ಸಂಸ್ಥೆಗಳಿಂದ ಮಾಹಿತಿ ಬಂದ ನಂತರ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.
ಎಂಟು ವಾರಗಳೊಳಗೆ ಕೈಗೊಂಡ ಕ್ರಮಗಳ ಕುರಿತು ಅಫಿಡವಿಟ್ ಸಲ್ಲಿಸಲು ಸುಪ್ರೀಂ ಕೋರ್ಟ್ ಎಲ್ಲಾ ನಗರ ಪಾಲಿಕೆಗಳಿಗೆ ನಿರ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನಗರ ಪಾಲಿಕೆಗಳು ಬೀದಿ ನಾಯಿಗಳ ಬಗ್ಗೆ ಮಾಹಿತಿ ಪಡೆಯಲು ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು, ತರಬೇತಿ ಕೇಂದ್ರಗಳು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳು, ಕ್ರೀಡಾ ಸಂಕೀರ್ಣಗಳು, ಕ್ರೀಡಾಂಗಣಗಳು, ಬಸ್ ನಿಲ್ದಾಣಗಳು, ಡಿಪೋಗಳು, ರೈಲ್ವೆ ನಿಲ್ದಾಣಗಳು ಮತ್ತು ಇತರ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದ್ದು, ಬೀದಿ ನಾಯಿಗಳ ಬಗ್ಗೆ ಮಾಹಿತಿ ನೀಡುವಂತೆ ನಿರ್ದೇಶಿಸಲಾಗಿದೆ.
ಬೀದಿ ನಾಯಿಗಳು ತಮ್ಮ ಆವರಣ ಪ್ರವೇಶಿಸುವುದನ್ನು ತಡೆಯಲು ಸಂಸ್ಥೆಗಳಿಗೆ ಕಾಂಪೌಂಡ್ ಸುತ್ತಲೂ ತಡೆ ಗೋಡೆ ಅಥವಾ ಬೇಲಿಗಳನ್ನು ಹಾಕುವಂತೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.
ಬೀದಿ ನಾಯಿಗಳ ಮರು ಪ್ರವೇಶ ತಡೆಗಟ್ಟುವಿಕೆ, ತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛತೆಯ ನಿರ್ವಹಣೆಗೆ ಸಂಬಂಧಿಸಿದಂತೆ ನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಸಂಸ್ಥೆಗಳು ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ನೋಡಲ್ ಅಧಿಕಾರಿಯ ಹೆಸರು ಮತ್ತು ಸಂಪರ್ಕ ಸಂಖ್ಯೆಯನ್ನು ಸಂಸ್ಥೆಯ ಆವರಣದಲ್ಲಿ ಪ್ರದರ್ಶಿಸಬೇಕು ಮತ್ತು ನ್ಯಾಯವ್ಯಾಪ್ತಿಯ ನಾಗರಿಕ ಸಂಸ್ಥೆಯೊಂದಿಗೆ ಆ ಮಾಹಿತಿಯನ್ನು ಹಂಚಿಕೊಳ್ಳಬೇಕು. ಇನ್ನು ಕ್ರೀಡಾ ಸಂಕೀರ್ಣಗಳು ಮತ್ತು ಕ್ರೀಡಾಂಗಣಗಳ ಆಡಳಿತ ಮಂಡಳಿಗಳು ತಮ್ಮ ಆವರಣಕ್ಕೆ ಬೀದಿ ನಾಯಿಗಳು ಪ್ರವೇಶಿಸುವುದನ್ನು ತಡೆಯಲು 24x7 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ನೋಟಿಸ್ ಸ್ವೀಕರಿಸದ ಸಂಸ್ಥೆಗಳು ಸ್ವಯಂಪ್ರೇರಣೆಯಿಂದ ಗೂಗಲ್ ಫಾರಂ ಮೂಲಕ ವಿವರ ಒದಗಿಸುವಂತೆ ಸೂಚಿಸಿದ್ದಾರೆ.