ಬೆಂಗಳೂರು: ದಿತ್ವಾ ಚಂಡಮಾರುತ (Ditwah Cyclone)ಪರಿಣಾಮದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದಂತೆಯೇ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆಯೇ ತುಂತುರು ಮಳೆಯಾಗುತ್ತಿದೆ. ಇಂದು ಭಾನುವಾರ ರಜಾ ದಿನವಾಗಿರುವುದರಿಂದ ಹಲವರು ಈ ವಾತಾವರಣ, ಹವಾಮಾನವನ್ನು ಎಂಜಾಯ್ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಸಾಕಷ್ಟು ಚಳಿಯಿದೆ.ಇದೇ ವಾತಾವರಣ ಡಿಸೆಂಬರ್ 4ರವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಸಾಧಾರಣ ಮಳೆಯಾಗಲಿದೆ.
ವಿಜಯಪುರ ಹಾಗೂ ಬೀದರ್ನಲ್ಲಿ 12 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ದಿತ್ವಾ ಚಂಡಮಾರುತದ ಪರಿಣಾಮದಿಂದಾಗಿ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದ ಕೆಲವೆಡೆ ಒಂದೆರಡು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ.
ಡಿಸೆಂಬರ್ 4ರ ಬಳಿಕ ರಾಜ್ಯದೆಲ್ಲೆಡೆ ಒಣಹವೆ ಮುಂದುವರೆಯಲಿದೆ. ಮುಂದಿನ ಒಂದೆರಡು ದಿನಗಳಲ್ಲಿ ಕನಿಷ್ಠ ಉಷ್ಣಾಂಶ 2 ರಿಂದ 3ಡಿಗ್ರಿ ಸೆಲ್ಸಿಯಸ್ನಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, 24 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವಿದೆ.
ಚೆನ್ನೈ ಮತ್ತು ಸುತ್ತಮುತ್ತ ಮಳೆ: ಚಂಡಮಾರುತದಿಂದ ಉಂಟಾಗುವ ಯಾವುದೇ ಅನಾಹುತಗಳನ್ನು ಎದುರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದರೂ, ನಿನ್ನೆ ಸಾಯಂಕಾಲ ಚೆನ್ನೈ ನಗರ ಮತ್ತು ಅದರ ನೆರೆಯ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ದಿತ್ವಾ ಚಂಡಮಾರುತವು ಕಳೆದ ಆರು ಗಂಟೆಗಳಲ್ಲಿ ಗಂಟೆಗೆ 10 ಕಿ.ಮೀ ವೇಗದಲ್ಲಿ ಉತ್ತರದ ಕಡೆಗೆ ಚಲಿಸಿತು. ಭಾರತೀಯ ಕಾಲಮಾನ ಪ್ರಕಾರ ನಿನ್ನೆ ಸಂಜೆ 5.30ಕ್ಕೆ ನೈಋತ್ಯ ಬಂಗಾಳಕೊಲ್ಲಿ ಮತ್ತು ಪಕ್ಕದ ಉತ್ತರ ಶ್ರೀಲಂಕಾ ಮತ್ತು ತಮಿಳುನಾಡು ಕರಾವಳಿಗಳ ಮೇಲೆ ಕೇಂದ್ರೀಕೃತವಾಗಿತ್ತು.
ಇದು ಜಾಫ್ನಾ (ಶ್ರೀಲಂಕಾ) ದಿಂದ ಈಶಾನ್ಯಕ್ಕೆ 110 ಕಿ.ಮೀ., ವೇದಾರಣ್ಯಂ (ನಾಗಪಟ್ಟಣಂ ಜಿಲ್ಲೆ) ದಿಂದ ಪೂರ್ವಕ್ಕೆ 80 ಕಿ.ಮೀ., ಕಾರೈಕಲ್ ನಿಂದ ಆಗ್ನೇಯಕ್ಕೆ 100 ಕಿ.ಮೀ., ಪುದುಚೇರಿಯ ಆಗ್ನೇಯ-ಆಗ್ನೇಯಕ್ಕೆ 190 ಕಿ.ಮೀ. ಮತ್ತು ಚೆನ್ನೈನಿಂದ ದಕ್ಷಿಣಕ್ಕೆ 290 ಕಿ.ಮೀ. ದೂರದಲ್ಲಿದೆ.
ಇದು ಉತ್ತರ-ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ. ಇಂದು ಬೆಳಗಿನ ಜಾವ ಉತ್ತರ ತಮಿಳುನಾಡು, ಪುದುಚೇರಿ ಮತ್ತು ಪಕ್ಕದ ದಕ್ಷಿಣ ಆಂಧ್ರಪ್ರದೇಶದ ಕರಾವಳಿಗಳ ಬಳಿ ಬಂಗಾಳ ಕೊಲ್ಲಿಯ ನೈಋತ್ಯ ಭಾಗವನ್ನು ತಲುಪುವ ಸಾಧ್ಯತೆಯಿದೆ.
ದಿತ್ವಾ ಚಂಡಮಾರುತವು ಕಾವೇರಿ ತೀರದ ಜಿಲ್ಲೆಗಳಿಗೆ ಹಾಗೂ ರಾಮನಾಥಪುರಂನಂತಹ ಕರಾವಳಿ ಜಿಲ್ಲೆಗಳಿಗೆ ಭಾರೀ ಮಳೆಯನ್ನು ತಂದಿದೆ. ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ.
ದಿತ್ವಾ ಚಂಡಮಾರುತದಿಂದ ಉಂಟಾದ ಭಾರೀ ಮಳೆ ಮತ್ತು ಪ್ರವಾಹದಿಂದ ಮೃತರ ಸಂಖ್ಯೆ 153ಕ್ಕೆ ಏರಿಕೆಯಾಗಿದ್ದು, ಇನ್ನೂ 176 ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿರುವುದರಿಂದ ಶ್ರೀಲಂಕಾ ತುರ್ತು ಪರಿಸ್ಥಿತಿಯನ್ನು ಘೋಷಿಸಿತು ಮತ್ತು ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಮನವಿ ಮಾಡಿತು.
ಹವಾಮಾನ ವೈಪರೀತ್ಯವು 15,000 ಕ್ಕೂ ಹೆಚ್ಚು ಮನೆಗಳನ್ನು ನಾಶಪಡಿಸಿದೆ, 78,000 ಜನರನ್ನು ರಾಜ್ಯ ಸ್ವಾಮ್ಯದ ತಾತ್ಕಾಲಿಕ ಆಶ್ರಯ ತಾಣಗಳಿಗೆ ಕಳುಹಿಸಿದೆ ಎಂದು ವಿಪತ್ತು ನಿರ್ವಹಣಾ ಕೇಂದ್ರ (ಡಿಎಂಸಿ) ತಿಳಿಸಿದೆ.