ಬೆಂಗಳೂರು: 32 ವರ್ಷದ ಮಹಿಳೆಯೊಬ್ಬರು ರೌಡಿಶೀಟರ್ ಸೇರಿದಂತೆ ತನ್ನ ಇಬ್ಬರು ಸ್ನೇಹಿತರ ವಿರುದ್ಧ ವಂಚನೆ, 8 ಲಕ್ಷ ರೂಪಾಯಿ ಸುಲಿಗೆ ಹಾಗೂ ತನ್ನ ಖಾಸಗಿ ಫೋಟೊಗಳು ಮತ್ತು ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ದೂರು ದಾಖಲಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ತುಮಕೂರು ಮೂಲದ ಸಂತ್ರಸ್ತೆ, ಬನಶಂಕರಿಯಲ್ಲಿರುವ ತನ್ನ ಚಿಕ್ಕಮ್ಮನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. 2022ರಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಸ್ವರೂಪ್ ಗೌಡ ಎಂಬುವವರನ್ನು ಸಂಪರ್ಕಿಸಿದ್ದಾರೆ. ಆಗಾಗ್ಗೆ ಮಾತುಕತೆ ಮತ್ತು ಭೇಟಿಯ ನಂತರ, ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಹಣ ನೀಡುವಂತೆ ಆರೋಪಿ ಕೇಳಿದ್ದಾನೆ. ಆತನನ್ನು ನಂಬಿದ ಸಂತ್ರಸ್ತೆ ಆನ್‌ಲೈನ್ ಪಾವತಿಗಳ ಮೂಲಕ ಹಂತ ಹಂತವಾಗಿ 4.42 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದಾರೆ.
ನಂತರ, ಆಕೆ ಹೆಚ್ಚಿನ ಹಣವನ್ನು ನೀಡಲು ನಿರಾಕರಿಸಿದಾಗ, ಸ್ವರೂಪ್ ತನ್ನ ಖಾಸಗಿ ಫೋಟೊಗಳು ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಭಯಗೊಂಡ ಆಕೆ ತನ್ನ ಚಿನ್ನಾಭರಣಗಳನ್ನು ಅಡವಿಟ್ಟು ಹೆಚ್ಚುವರಿಯಾಗಿ 4 ಲಕ್ಷ ರೂ.ಗಳನ್ನು ನೀಡಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಪದೇ ಪದೆ ವಿನಂತಿಸಿದರೂ, ಸ್ವರೂಪ್ ಹಣವನ್ನು ಹಿಂದಿರುಗಿಸಲಿಲ್ಲ. ಬದಲಿಗೆ ಆಕೆಯನ್ನು ನಿಂದಿಸುವುದು ಮತ್ತು ಬೆದರಿಕೆ ಹಾಕಿದರು. ಅಲ್ಲದೆ, ಆತ ಆಕೆಯ ಖಾಸಗಿ ವಿಡಿಯೋಗಳನ್ನು ಕಳುಹಿಸಿದ್ದಾನೆ ಮತ್ತು ಅವುಗಳನ್ನು ಆಕೆಯ ಪತಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದನು ಎಂದು ಆರೋಪಿಸಲಾಗಿದೆ.
ಇತ್ತೀಚೆಗೆ ಬಸವೇಶ್ವರನಗರ ಬಳಿ ಸ್ವರೂಪ್‌ನ ಸ್ನೇಹಿತ ಗಿರಿ ಕೂಡ ತನ್ನನ್ನು ಬೆದರಿಸಿದ್ದಾನೆ. ಪ್ರಕರಣವನ್ನು ಮುಂದುವರಿಸಿದರೆ ಖಾಸಗಿ ವಿಡಿಯೋಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದ್ದಾರೆ.