ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಖರ್ಗೆಯವರ ಆರೋಗ್ಯ ಕುರಿತು ಅವರ ಪುತ್ರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆಯವರು ಮಾಹಿತಿ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಖರ್ಗೆ ಅವರಿಗೆ ಪೇಸ್‌ಮೇಕರ್ ಅಳವಡಿಕೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದು ಒಂದು ಸಣ್ಣ ಶಸ್ತ್ರಚಿಕಿತ್ಸೆಯಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ಅವರ ಆರೋಗ್ಯ ಸ್ಥಿರವಾಗಿದೆ. ಅಕ್ಟೋಬರ್ 3 ರಿಂದ ತಮ್ಮ ಕೆಲಸವನ್ನು ಪುನರಾರಂಭಿಸುವ ನಿರೀಕ್ಷೆಯಿದೆಯ ಅವರ ಎಲ್ಲಾ ನಿಗದಿತ ಕಾರ್ಯಯೋಜನೆಗಳಿಗೆ ಹಾಜರಾಗುತ್ತಾರೆ. ಎಲ್ಲರೂ ನೀಡಿದ ಕಾಳಜಿ, ಬೆಂಬಲ ಮತ್ತು ಪ್ರೀತಿಗೆ ನಮ್ಮ ಕೃತಜ್ಞತೆಗಳು ಎಂದು ಹೇಳಿದ್ದಾರೆ.
ಈ ನಡುವೆ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯ ಚಿಕಿತ್ಸೆ ಪಡೆಯುತ್ತಿರುವ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಆಸ್ಪತ್ರೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖರ್ಗೆ ಅವರ ಆರೋಗ್ಯ ಉತ್ತಮವಾಗಿದೆ. ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆಯವರ ಆರೋಗ್ಯ ಸುಧಾರಣೆಯಾಗಿದೆ. ಖರ್ಗೆ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೇನೆ, ಅವರ ಆರೋಗ್ಯವೀಗ ಉತ್ತಮವಾಗಿದೆ ಎಂದು ಹೇಳಿದರು.