ಬಳ್ಳಾರಿ: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಹೊಳಗುಂದ ಮಂಡಲದ ದೇವರಗಟ್ಟದ ಮಾಳ ಮಲ್ಲೇಶ್ವರ ಸ್ವಾಮಿ ಬನ್ನಿ ಉತ್ಸವ ಸಂದರ್ಭದಲ್ಲಿ ಗ್ರಾಮಸ್ಥರ ನಡುವೆ ಘರ್ಷಣೆ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ನೂರು ಜನರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಗುರುವಾರ ಮಧ್ಯರಾತ್ರಿ ಮಲ್ಲೇಶ್ವರ ಸ್ವಾಮಿ ಮತ್ತು ಮಾಳಮ್ಮ ದೇವಿಯ ಕಲ್ಯಾಣೋತ್ಸವ ನಂತರ ರಾಜಬೀದಿಯಲ್ಲಿ ಚೈತ್ರಯಾತ್ರೆ ನಡೆಸಲಾಯಿತು. ದೇವರ ವಿಗ್ರಹಗಳನ್ನು ತೆಗೆದುಕೊಂಡು ಹೋಗಲು ಎರಡು ಗುಂಪುಗಳು ಪೈಪೋಟಿ ನಡೆಸಿದವು.
ಈ ಪ್ರಕ್ರಿಯೆಯಲ್ಲಿ ಕೋಲುಗಳಿಂದ ಹೊಡೆದಾಟ ನಡೆಯಿತು. ಇದರ ಪರಿಣಾಮವಾಗಿ ಇಬ್ಬರು ಭಕ್ತರು ಮೃತಪಟ್ಟರು. 100 ಜನರು ಗಾಯಗೊಂಡರು. ಈ ಪೈಕಿ ಐವರು ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆದವನಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕರ್ನೂಲ್ ಜಿಲ್ಲೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದೇವರಗುಡ್ಡದ ತಾತ್ಕಾಲಿಕ ಆಸ್ಪತ್ರೆಯಲ್ಲಿ ಕೆಲ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬನ್ನಿ ಹಬ್ಬದ ಅಂಗವಾಗಿ ಗ್ರಾಮದಲ್ಲಿ ಸಾಂಪ್ರದಾಯಿಕ ರಕ್ತಸಿಕ್ತ ಆಚರಣೆ ನಡೆಯುತ್ತದೆ. ಕೋಲುಗಳು, ಬಡಿಗೆ, ಮರದ ತುಂಡುಗಳಿಂದ ಭಕ್ತರು ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ.