ಬೆಂಗಳೂರು: ರಾಜ್ಯದಲ್ಲಿ ಹಸಿರು ಹೊದಿಕೆಯನ್ನು ಸುಧಾರಿಸಲು ಮತ್ತು ರಕ್ಷಿಸಲು ಶಿಕ್ಷಣ ಸಂಸ್ಥೆಗಳು ತಮ್ಮ ತಮ್ಮ ವಾರ್ಡ್‌ಗಳಲ್ಲಿ ಮರಗಳನ್ನು ದತ್ತು ತೆಗೆದುಕೊಳ್ಳಬೇಕು, ಪ್ರತೀ ಮಗು ಸೇರಿದಂತೆ ಪ್ರತಿಯೊಬ್ಬರೂ ಸಸಿಗಳ ನೆಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುರುವಾರ ಹೇಳಿದರು.
71ನೇ ವನ್ಯಜೀವಿ ಸಪ್ತಾಹ ಆಚರಣೆ ಅಂಗವಾಗಿ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ “ವನ್ಯಜೀವಿ ಸಂರಕ್ಷಣೆಗಾಗಿ ಕಾಲ್ನಡಿಗೆ” ಕಾರ್ಯಕ್ರಮಕ್ಕೆ ವಿಧಾನಸೌಧದ ಮುಂಭಾಗ ಚಾಲನೆ ನೀಡಿ, ಕಾರ್ಯಕ್ರಮವನ್ನು ಉದ್ದೇಶಿಸಿ ಡಿಕೆ.ಶಿವಕುಮಾರ್ ಅವರು ಮಾತನಾಡಿದರು.
ಈ ಹಿಂದೆ ರಾಜ್ಯದಲ್ಲಿ ಸಾಕಷ್ಟು ಹಸಿರು ಪ್ರದೇಶಗಳು ಮತ್ತು ಕೃಷಿಭೂಮಿಗಳಿದ್ದವು, ಆದರೆ, ಈಗ ದೊಡ್ಡ ಕಟ್ಟಡ ಮತ್ತು ಅಪಾರ್ಟ್‌ಮೆಂಟ್ ಸಂಕೀರ್ಣಗಳಿಂದಾಗಿ ಈ ಪ್ರದೇಶ ನಾಶವಾಗಿದೆ. ಬಾಲ್ಕನಿ ಹಾಗೂ ತೋಟಗಳಲ್ಲಿ ಮಾತ್ರ ಹಸಿರು ಕಾಣಿಸುತ್ತಿದೆ. ಹೀಗಾಗಿ ಜನರು, ವಿಶೇಷವಾಗಿ ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟು, ಮರಗಳ ಬೆಳೆಸಿ ಹಸಿರನ್ನು ರಕ್ಷಿಸಬೇಕು. ಇಲ್ಲಿಯವರೆಗೆ, ಬೆಂಗಳೂರಿನಲ್ಲಿ ಮಾತ್ರ ಒಂದು ಲಕ್ಷ ಸಸಿಗಳನ್ನು ವಿದ್ಯಾರ್ಥಿಗಳು ನೆಟ್ಟಿದ್ದಾರೆ. ರಾಜ್ಯಾದ್ಯಂತ ಅದೇ ರೀತಿ ಮಾಡಬೇಕಾಗಿದೆ ಎಂದು ಹೇಳಿದರು.
ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರು ಮಾತನಾಡಿ, ಕಠಿಣ ಪರಿಸರ ನಿಯಮಗಳು ಮತ್ತು ಕಾನೂನುಗಳಿವೆ, ಆದರೂ ಮಲೆಮಹದೇಶ್ವರ ಬೆಟ್ಟದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಐದು ಹುಲಿಗಳು, ಮಧುಗಿರಿಯಲ್ಲಿ 20 ನವಿಲುಗಳು ಮತ್ತು ಬಂಡೀಪುರ ಹುಲಿ ಮೀಸಲು ಪ್ರದೇಶದಲ್ಲಿ 19 ಮಂಗಗಳು ಸೇರಿ ಅನೇಕ ವನ್ಯಜೀವಿಗಳ ಸಾವುಗಳು ವರದಿಯಾಗಿವೆ. ಅನೇಕ ಆನೆಗಳ ಸಾವುಗಳು ನಿಯಮಿತವಾಗಿ ವರದಿಯಾಗುತ್ತಿವೆ. ಎಲ್ಲಾ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪರಿಸರ ವ್ಯವಸ್ಥೆಯಲ್ಲಿ ವನ್ಯಜೀವಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಪರಿಸರ ರಕ್ಷಣೆಗೆ ನಿರ್ಣಾಯಕವಾಗಿದೆ. ಈಗಾಗಲೇ, ಅನೇಕ ಪ್ರಭೇದಗಳು ಅಳಿದುಹೋಗಿವೆ. ಇತರ ಪ್ರಾಣಿಗಳು ಅಳಿವಿನಂಚಿನಲ್ಲಿವೆ. ಮಾನವರು ಮತ್ತು ವನ್ಯಜೀವಿಗಳ ಸಹಬಾಳ್ವೆ ಇಂದು ನಿರ್ಣಾಯಕ ಮತ್ತು ಅನಿವಾರ್ಯವಾಗಿದೆ ಎಂದರು.
ಇದೇ ವೇಳೆ ದೀಪಾವಳಿ ಹಬ್ಬದ ಸಮಯದಲ್ಲಿ ಜನರು ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಮನವಿ ಮಾಡಿದರು.