ಬೆಂಗಳೂರು: ವಿವಿಧ ಕಾರಣಗಳಿಂದ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ಕಾರ್ಯಕರ್ತರು ಹಾಗೂ ಪೊಲೀಸರ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಅನುಮತಿ ನಿರಾಕರಿಸಿದ್ದರೂ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನಾ ಜಾಥಾ ನಡೆಸಿದ ಆರೋಪದ ಮೇಲೆ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಅಧಿಕಾರಿಗಳಿಗೆ ಕೊಲೆ ಬೆದರಿಕೆ: ಸೆ. 30 ರಂದು ನಡೆದ ಘಟನೆಯ ನಂತರ ಆರೋಪಿಗಳನ್ನು ಬಂಧಿಸಿ ನಂತರ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಆರೋಪಿಗಳು ತನಿಖೆಯಲ್ಲಿ ತೊಡಗಿರುವ ಅಧಿಕಾರಿಗಳಿಗೆ ಕೊಲೆ ಬೆದರಿಕೆ ಹಾಕುವುದನ್ನು ಮುಂದುವರೆಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಲೇ ಇದ್ದರು. ಈ ನಿಟ್ಟಿನಲ್ಲಿ ಹೆಚ್ಚುವರಿ ಸೆಕ್ಷನ್‌ಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಷ್ಟಕ್ಕೂ ಆದದ್ದು ಏನು?
ಪೊಲೀಸರ ಪ್ರಕಾರ, ಸೆಪ್ಟೆಂಬರ್ 30 ರಂದು "ಜನರ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಕುರಿತು ಜಾಗೃತಿ ಮೂಡಿಸಲು ಫ್ರೀಡಂ ಪಾರ್ಕ್‌ನಲ್ಲಿ ಶಾಂತಿಯುತ ಪ್ರತಿಭಟನೆ" ನಡೆಸಲು ಅನುಮತಿ ಕೋರಿ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ಬೆಂಗಳೂರು ಪಶ್ಚಿಮ ಜಿಲ್ಲಾ ಘಟಕದ ಅಧ್ಯಕ್ಷ (ಸಂಘಟನೆ) ಅಮಿತ್ ರೆಬೆಲ್ಲೋ ಅವರು ಉಪ್ಪಾರಪೇಟೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಿಗೆ ಸೆ. 29 ರಂದು ಮನವಿ ಸಲ್ಲಿಸಿದ್ದರು. ಅದೇ ದಿನ ಮನವಿ ತಿರಸ್ಕರಿಸಿದ ಇನ್ಸ್ ಪೆಕ್ಟರ್, ಅಂದು ಎರಡು ಇತರ ಪ್ರತಿಭಟನೆಗಳಿಗೆ ಫ್ರೀಡಂ ಪಾರ್ಕ್ ನಲ್ಲಿ ಅನುಮತಿ ನೀಡಲಾಗಿದ್ದು, ಕೆಆರ್ ಎಸ್ ಪಕ್ಷದ ಪ್ರತಿಭಟನೆಗೆ ಅನುಮತಿ ನೀಡಲಾಗದು ಎಂದಿದ್ದಾರೆ
ನೋಟಿಸ್ ನಲ್ಲಿ ಇರುವುದು ಏನು?
ಸ್ವಾತಂತ್ರ್ಯ ಉದ್ಯಾನವನ ಹೊರತುಪಡಿಸಿ ಬೆಂಗಳೂರಿನ ಎಲ್ಲಿಯೂ ಪ್ರತಿಭಟನೆ, ಧರಣಿ, ಮುಷ್ಕರ ನಡೆಸಬಾರದು ಎಂದು ಹೈಕೋರ್ಟ್ ಆದೇಶ ಇರುವುದಾಗಿ ಪಕ್ಷದ ಪ್ರತಿನಿಧಿಗಳಿಗೆ ಮಾಹಿತಿ ನೀಡಿರುವುದಾಗಿ ಲಿಖಿತ ನೋಟಿಸ್ ನಲ್ಲಿ ಪೊಲೀಸರು ಹೇಳಿದ್ದಾರೆ.
ಆದರೆ, ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಮತ್ತು ಪೊಲೀಸರು ನೀಡಿದ ಸೂಚನೆಗಳನ್ನು ನಿರ್ಲಕ್ಷಿಸಿ, ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು ತಮ್ಮ ಕಾರ್ಯಕರ್ತರನ್ನು ಎಸ್‌ಎಂಎಸ್, ವಾಟ್ಸಾಪ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಪ್ರಚೋದಿಸಿ, ಸೆ.30 ರಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಗೆ ಜಮಾಯಿಸುವಂತೆ ಕರೆ ನೀಡಿದ್ದರು.
ಫ್ರೀಡಂ ಪಾರ್ಕ್ ಹೊರತುಪಡಿಸಿ ಬೆಂಗಳೂರು ನಗರದಲ್ಲಿ ಯಾವುದೇ ಪ್ರತಿಭಟನೆ, ಮೆರವಣಿಗೆ, ಧರಣಿ ನಡೆಸಬಾರದು ಎಂದು ಹೈಕೋರ್ಟ್‌ನ ಸ್ಪಷ್ಟ ಆದೇಶದ ಹೊರತಾಗಿಯೂ ಸೆ.30ರಂದು ಸುಮಾರು 60-70 ಕೆಆರ್‌ಎಸ್ ಕಾರ್ಯಕರ್ತರು ಗಾಂಧಿನಗರದ 6ನೇ ಅಡ್ಡ ಹಾಗೂ 2ನೇ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸುಗಮ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.