ಕಳೆದ ಸೆ.22 ರಿಂದ ಬೆಂಗಳೂರು ನಗರ ಹೊರತು ಪಡಿಸಿ ರಾಜ್ಯಾದ್ಯಂತ ಕರ್ನಾಟಕ ಹಿಂದುಳಿದ ವರ್ಗ ಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಭರದಿಂದ ಸಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ 5 ಪಾಲಿಕೆ ವ್ಯಾಪ್ತಿಯಲ್ಲಿ ಶನಿವಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ಪ್ರಾರಂಭವಾಗಿದೆ. ಸಮೀಕ್ಷೆಗೆ ಅಂತಿಮ ತರಬೇತಿ ಪಡೆದಿರುವ 17,500 ಮಂದಿ ಅಧಿಕಾರಿ ಸಿಬ್ಬಂದಿಗಳು ಮನೆ ಮನೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಈ ಮಧ್ಯೆ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಬೆಂಗಳೂರಿನಲ್ಲಿ ಮೊದಲ ದಿನವಾದ ಶನಿವಾರ ಅಡೆತಡೆಗಳು ಎದುರಾಗಿದ್ದು, ತಮ್ಮ ಕುಂದುಕೊರತೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಗಣತಿದಾರರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ನಿರತ ಗಣತಿದಾರರು ತಾಂತ್ರಿಕ ದೋಷಗಳು, ಸರ್ವರ್ ಸಮಸ್ಯೆಗಳು ಮತ್ತು 25 ಕಿ.ಮೀ.ವರೆಗಿನ ದೂರದ ಸ್ಥಳಗಳಿಗೆ ನಿಯೋಜಿಸಿರುವುದರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ಪ್ರಮಾಣಪತ್ರ ಇದ್ದರೂ ಸಹ ಆರೋಗ್ಯ ಸಮಸ್ಯೆಗಳ ಹೊರತಾಗಿಯೂ ಕೆಲವು ಗಣತಿದಾರರನ್ನು ಕರ್ತವ್ಯಕ್ಕೆ ಕರೆಯಲಾಗಿದೆ ಎಂದು ಗಣತಿದಾರರು ದೂರಿದ್ದಾರೆ.
ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುವ ವ್ಯಕ್ತಿಗಳು ಇಂದು DCM ಡಿಕೆ ಶಿವಕುಮಾರ್ ಅವರ ಮನೆಗೆ ತೆರಳಿದ್ದರು. ಈ ವೇಳೆ ಕೆಲವು ಪ್ರಶ್ನೆಗಳಿಗೆ ತಾಳ್ಮೆಯಿಂದಲೇ ಉತ್ತರಿಸಿದ ಡಿಸಿಎಂ, ಇನ್ನೂ ಕೆಲವು ಪ್ರಶ್ನೆಗಳಿಗೆ ಗರಂ ಆಗಿದ್ದಾರೆ. ಸಮೀಕ್ಷೆಯಲ್ಲಿ ಭಾಗಿಯಾದ ಡಿಸಿಎಂ ಡಿಕೆ ಶಿವಕುಮಾರ್ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರಿಸಿ ಸುಸ್ತಾಗಿ ಕಾಲಂನಲ್ಲಿ ಇವೆಲ್ಲಾ ಬೇಕಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಜ್ಯುವೆಲರಿ ಇದೆಯಾ ಇಲ್ಲವಾ ಎನ್ನುವ ಪ್ರಶ್ನೆಗೆ ಆಕ್ರೋಶಗೊಂಡ ಡಿಸಿಎಂ, ಪರ್ಸನಲ್ ಡೀಟೆಲ್ಸ್ ಗೆ ಹೋಗಬಾರದು, ಕುರಿ ಕೋಳಿ, ಟ್ರ್ಯಾಕ್ಟರ್ ಕೇಸ್, ಖಾಯಿಲೆ ಬಗ್ಗೆ ಎಲ್ಲಾ ಬೇಕಾ? ಸಿಂಪಲ್ ಆಗಿ ಸಮೀಕ್ಷೆ ಮಾಡಿ. ನಮಗೇನೆ ತಾಳ್ಳೆ ಇಲ್ಲ, ಇನ್ನು ಜನರು ಎಲ್ಲಿಂದ ಮಾಹಿತಿ ಕೊಡ್ತಾರೆ ಎಂದು ಹೇಳಿದ್ದಾರೆ.
ಬೆಳಗಾವಿಯ ಖಡೇಬಜಾರ್‌ನ ಖಡಕ್ ಗಲ್ಲಿಯಲ್ಲಿ ನಿನ್ನೆ ರಾತ್ರಿ ನಡೆದ ಉರುಸ್ ಮೆರವಣಿಗೆ ಹಿಂದೂ-ಮುಸ್ಲಿಮರ ನಡುವೆ ಜಟಾಪಟಿಗೆ ಕಾರಣವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಮಾಬುಸುಬಾನಿ ದರ್ಗಾ ಉರುಸ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿಯ ಖಡಕ್ ಗಲ್ಲಿ ಮೂಲಕ ಮೆರವಣಿಗೆ ಸಾಗಿತ್ತು. ಈ ವೇಳೆ ಕೆಲ ಯುವಕರು ‘ಐ ಲವ್ ಮೊಹಮ್ಮದ್’ ಎಂಬ ಘೋಷಣೆ ಕೂಗುತ್ತಾ ತೆರಳಿದ್ದಾರೆ. ಇದು ಸ್ಥಳೀಯ ಹಿಂದೂಗಳನ್ನು ಕೆರಳಿಸಿದ್ದು ಇದಕ್ಕೆ ಆಕ್ಷೇಪಿಸಿದ್ದಾರೆ. ಇದಾದ ಕೆಲಹೊತ್ತಿನಲ್ಲೇ ಅನ್ಯಕೋಮಿನ ಯುವಕರು ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ತಲ್ವಾರ್ ಪ್ರದರ್ಶಿಸಿ ಗೂಂಡಾವರ್ತನೆ ತೋರಿದ ಆರೋಪ ಕೇಳಿಬಂದಿದೆ.
ಟಿಜೆಎಸ್ ಜಾರ್ಜ್ ಎಂದೇ ಪ್ರಸಿದ್ಧರಾದ ಪದ್ಮಭೂಷಣ ಪುರಸ್ಕೃತ ಖ್ಯಾತ ಪತ್ರಕರ್ತ ಥೈಲ್ ಜಾಕೋಬ್ ಸೋನಿ ಜಾರ್ಜ್ ಇಹ ಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಟಿಜೆಎಸ್ ಹೃದಯಾಘಾತದಿಂದ ನಿಧನರಾದರು. ಟಿಜೆಎಸ್ ಜಾರ್ಜ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. 1928 ಮೇ 7 ರಂದು ಕೇರಳದಲ್ಲಿ ಜನಿಸಿದ್ದ ಟಿಜೆಎಸ್ ಅವರು, ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದರು. 1950ರಲ್ಲಿ ಮುಂಬೈನ ದಿ ಫ್ರೀ ಪ್ರೆಸ್ ಜರ್ನಲ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್‌ನೊಂದಿಗಿನ ಅವರ ದೀರ್ಘಾವಧಿಯ ಅವಧಿಯಲ್ಲಿ, ಟಿಜೆಎಸ್ ಜೂನ್ 12, 2022 ರಂದು "ಈಗ ವಿದಾಯ ಹೇಳುವ ಸಮಯ" ದೊಂದಿಗೆ 25 ವರ್ಷಗಳ ಕಾಲ 1300 ಅಂಕಣಗಳನ್ನು ಬರೆದಿದ್ದಾರೆ.
ರಾಜ್ಯದ ಮಲ್ಟಿಪ್ಲೆಕ್ಸ್‌ಗಳಲ್ಲಿನ ಚಲನಚಿತ್ರ ಪ್ರದರ್ಶನದ ಟಿಕೆಟ್ ಮೇಲೆ ವಿಧಿಸಿದ್ದ 200 ರೂಪಾಯಿಗಳ ಮಿತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಸಿನಿಮಾ ವೀಕ್ಷಿಸುವವರು ತಮ್ಮ ಟಿಕೆಟ್ ಮತ್ತು ಹಣ ಪಾವತಿಸಿದ ದಾಖಲೆಗಳನ್ನು ಜಾಗರೂಕತೆಯಿಂದ ಇಟ್ಟುಕೊಳ್ಳುವಂತೆ ಚಿತ್ರ ವೀಕ್ಷಕರಿಗೆ ರಾಜ್ಯ ಸರ್ಕಾರ ಸೂಚಿಸಿದೆ. ಒಂದು ವೇಳೆ ಭಾರತೀಯ ಮಲ್ಟಿಪ್ಲೆಕ್ಸ್‌ಗಳ ಸಂಘ ಮತ್ತು ಇತರರು ರಾಜ್ಯ ಸರ್ಕಾರ ನಿಗದಿಪಡಿಸಿದ ಮಿತಿಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿ, ರಾಜ್ಯ ಸರ್ಕಾರದ ಪರ ತೀರ್ಪು ಬಂದರೆ, ಮಲ್ಟಿಪ್ಲೆಕ್ಸ್ ಗಳು ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಸಂಗ್ರಹಿಸಿದ ಎಲ್ಲಾ ಮೊತ್ತವನ್ನು ಟಿಕೆಟ್ ಗಳನ್ನು ಬುಕ್ ಮಾಡಿದ ಗ್ರಾಹಕರಿಗೆ ಬುಕ್ಕಿಂಗ್‌ಗೆ ಬಳಸಿದ ಪಾವತಿ ವಿಧಾನದ ಮೂಲಕವೇ ಮರುಪಾವತಿಸಬೇಕು ಎಂದು ನಿರ್ದೇಶಿಸಲಾಗಿದೆ.