ಬೆಂಗಳೂರು: ಬೆಂಗಳೂರಿನ ಆಟೋ ಚಾಲಕರ ಕುರಿತಂತೆ ದಿನಕ್ಕೊಂದು ಕಥೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ... ಕೆಲವು ಸಕಾರಾತ್ಮಕ ಕಥೆಗಳಾದರೆ ಕೆಲವು ನಕರಾತ್ಮಕವಾಗಿರುತ್ತವೆ. ಆದರೆ ಇಲ್ಲೊಬ್ಬ ಚಾಲಕ ತನ್ನ ಸಂಪಾದನೆ ಮೂಲಕ ಇಂಟರ್ನೆಟ್ ನಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಹೌದು.. ಎಂಜಿನಿಯರ್ ಆಕಾಶ್ ಆನಂದನಿ ಎಂಬುವವರು ಈ ಕುತೂಹಲಕಾರಿ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಕ್ಟೋಬರ್ 4 ರಂದು ಆನಂದನಿ ಹತ್ತಿದ್ದ ಆಟೋ ಚಾಲಕನೊಂದಿಗೆ ಮಾತುಕತೆ ನಡೆಸಿದಾಗ ಈ ಕುತೂಹಲಕಾರಿ ಕಥೆ ಅನಾವರಣವಾಗಿದೆ.
ಆಟೋ ಹತ್ತಿ ಚಾಲಕನ ಕೈಯಲ್ಲಿದ್ದ ಆ್ಯಪಲ್ ವಾಚ್ ಮತ್ತು ಏರ್‌ಪಾಡ್‌ಗಳನ್ನು ನೋಡಿದ ಆನಂದನಿ ಆಟೋ ಚಾಲಕನ ಮಾತಿಗೆಳೆದಿದ್ದಾರೆ. ಈ ವೇಳೆ ಚಾಲಕ ವಾರಾಂತ್ಯದಲ್ಲಿ ವಾಹನ ಚಲಾಯಿಸುತ್ತಿರುವುದಾಗಿ ಹೇಳಿದರು.
'ಬೆಂಗಳೂರು ಹುಚ್ಚು ಹಿಡಿಸಿದೆ. ಆಟೋ ವ್ಯಾಪಾರಿ ಭಯ್ಯಾ ತನಗೆ 4-5 ಕೋಟಿ ಬೆಲೆಬಾಳುವ 2 ಮನೆಗಳಿವೆ, ಎರಡೂ ಬಾಡಿಗೆ ರೂಪದಲ್ಲಿ ತಿಂಗಳಿಗೆ ಸುಮಾರು 2-3 ಲಕ್ಷ ಗಳಿಸುತ್ತವೆ.
ಇಷ್ಟು ಮಾತ್ರವಲ್ಲದೇ AI ಆಧಾರಿತ ಸ್ಟಾರ್ಟ್‌ಅಪ್‌ನಲ್ಲಿ ಹೂಡಿಕೆ ಕೂಡ ಹೊಂದಿದ್ದಾರೆ' ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಪೋಸ್ಟ್ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ 1,300 ಕ್ಕೂ ಹೆಚ್ಚು ಲೈಕ್‌ಗಳು ಮತ್ತು 58,000 ವೀಕ್ಷಣೆಗಳನ್ನು ಗಳಿಸಿದೆ.
ನೆಟ್ಟಿಗರು ಕಮೆಂಟ್ ಗಳ ಸುರಿಮಳೆ
ಇನ್ನು ಈ ಪೋಸ್ಟ್ ಗೆ ನೆಟ್ಟಿಗರಿಂದ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಹಲವರು ಇದನ್ನು ಕಲ್ಪಿತ ಕಥೆ ಎಂದು ಟೀಕಿಸಿದ್ದು, ಮತ್ತೆ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ "ಬೆಂಗಳೂರು ಸ್ಟಾರ್ಟ್‌ಅಪ್ ರಾಜಧಾನಿಯಾಗಲು ಇದೇ ಕಾರಣ - ಆಟೋ ಚಾಲಕರು ಸಹ ಹೂಡಿಕೆದಾರರು!" ಎಂದು ಹಲವರು ಹುಬ್ಬೇರಿಸಿದ್ದಾರೆ.
ಮತ್ತೆ ಕೆಲವರು ಇದು ಸಾಧ್ಯ.. ಬೆಂಗಳೂರಿನಲ್ಲಿ ಒಂಟಿತನವು ಒಂದು ಪ್ರಮುಖ ಸಮಸ್ಯೆಯಾಗಿದೆ. ಇಲ್ಲಿ ಕೆಲವು ಹೆಚ್ಚು ಗಳಿಸುವ ಜನರು ಅದನ್ನು ಸೋಲಿಸಲು ಹವ್ಯಾಸವಾಗಿ ಟ್ಯಾಕ್ಸಿಗಳನ್ನು ಓಡಿಸುತ್ತಾರೆ. ಹಣಕ್ಕಾಗಿ ಅಲ್ಲ. ನಾನು ಅಂತಹ ಅನೇಕ ಪ್ರಕರಣಗಳನ್ನು ಕೇಳಿದ್ದೇನೆ" ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.