ಬೆಂಗಳೂರು: ಹಿರಿಯ ಪತ್ರಕರ್ತ, ಬರಹಗಾರ ಮತ್ತು ಅಂಕಣಕಾರ ಟಿಜೆಎಸ್ ಜಾರ್ಜ್ ಅವರ ಅಂತ್ಯಕ್ರಿಯೆ ಭಾನುವಾರ ಬೆಂಗಳೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು,
ಹೆಬ್ಬಾಳದ ಚಿತಾಗಾರದಲ್ಲಿ ಮಧ್ಯಾಹ್ನ 1.30 ರಿಂದ 2.30 ರವರೆಗೆ ಟಿಜೆಎಸ್ ಜಾರ್ಜ್ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ಗೌರವಕ್ಕಾಗಿ ಇರಿಸಲಾಗಿತ್ತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ರಾಜಕೀಯ, ಪತ್ರಿಕೋದ್ಯಮ, ಸಾಹಿತ್ಯ, ವಿವಿಧ ಕ್ಷೇತ್ರಗಳ ಹಲವು ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಅಗಲಿದ ಅಕರ ಮಾಂತ್ರಿಕನಿಗೆ ವಿದಾಯ ಹೇಳಿದರು.
ನಂತರ ಟಿಜೆಎಸ್ ಜಾರ್ಜ್ ಅವರ ಪುತ್ರ ಜೀತ್ ಫೈಲ್, ಪುತ್ರಿ ಶೇಬಾ ಥೈಲ್ ಸೇರಿ ಕುಟುಂಬಸ್ಥರು ದೇವ ರಲ್ಲಿ ಪ್ರಾರ್ಥನೆ ಸಲ್ಲಿಸಿ ಮಧ್ಯಾಹ್ನ 3ಕ್ಕೆ ಚಿತಾಗಾರದಲ್ಲಿ ಅಗ್ನಿಸ್ಪರ್ಶ ನೆರವೇರಿಸಿದರು.
ಇದಕ್ಕೂ ಮುನ್ನ ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ನುಡಿಸಿ ಪೊಲೀ ಸರಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಮೃತರಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಬಳಿಕ ಅಧಿಕಾರಿಗಳು ಮೃತದೇಹದ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜ ವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಜಾರ್ಜ್ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, 2 ತಿಂಗಳಿನಿಂದ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು. ಕಳೆದ ವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸಣ್ಣ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಕೊನೆಯುಸಿರೆಳೆದಿದ್ದರು.