ಬೆಂಗಳೂರು: ಆನ್‌ಲೈನ್ ಬೆಟ್ಟಿಂಗ್ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೋರಮಂಗಲದ ಕಾವೇರಿ ಕಾಲೋನಿಯಲ್ಲಿರುವ ಗೋಲ್ಡನ್ ಏಸಸ್ ಪೋಕರ್ ರೂಂ'ಗೆ ಭಾನುವಾರ ನುಗ್ಗಿದ ಕನ್ನಡ ಪರ ಸಂಘಟನೆಯ ಸದಸ್ಯರು ಸ್ಥಳದಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ.
ಪ್ರತಿಭಟನಾಕಾರರು ಕಚೇರಿಗೆ ನುಗ್ಗಿದಾಗ, ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ವಾಗ್ವಾದ ನಡೆಯಿತು. ಜೂಜಾಟ ನಡೆಸುವ ಮೂಲಕ ಯುವಕರನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸ್ಥಳದಲ್ಲಿದ್ದ ಪೀಠೋಪಕರಣಗಳನ್ನು ಕಾರ್ಯಕರ್ತರು ಧ್ವಂಸಗೊಳಿಸಿದರು.
ಘಟನೆ ಬಗ್ಗೆ ಮಾಹಿತಿ ತಿಳಿದ ಹೊಯ್ಸಳ ಗಸ್ತು ವಾಹನದ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ನಂತರ ಕ್ಲಬ್‌ನ ಮಾಲೀಕರು ಕನ್ನಡ ಕಾರ್ಯಕರ್ತರ ವಿರುದ್ಧ ಕೋರಮಂಗಲ ಪೊಲೀಸರಿಗೆ ದೂರು ನೀಡಿದರು, ಬಳಿಕ ಬಂಧಿತ ಕಾರ್ಯಕರ್ತರನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಸುದ್ದಿಗಾರರೊಂದಿಗೆ ಮಾತನಾಡಿದ ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಬಸವರಾಜ ಪಡುಕೋಟೆ ಅವರು, ನಾವು ಪೊಲೀಸರಿಗೆ ದೂರು ನೀಡಿದ್ದೇವೆ, ಆದರೆ, ಅವರು ಕೇವಲ NCR ದಾಖಲಿಸಿಕೊಂಡು ಕಂಪನಿಯು ಕಾರ್ಯಾಚರಣೆ ಮುಂದುವರಿಸಲು ಮತ್ತು ಯುವಕರನ್ನು ದಾರಿ ತಪ್ಪಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಪೊಲೀಸರು ಕಂಪನಿಯ ವಿರುದ್ಧ FIR ದಾಖಲಿಸಿ ಅದನ್ನು ನಡೆಸುತ್ತಿರುವವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.