ಕೋಲಾರ: ಬಂಗಾರಪೇಟೆ ಪೊಲೀಸ್ ವ್ಯಾಪ್ತಿಯ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ಸೋಮವಾರ ಸಂಜೆ ಕಲ್ಕೆರೆ ಗ್ರಾಮದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ಸುಮಾರು 19 ಮಂದಿ ಗಾಯಗೊಂಡಿದ್ದಾರೆ.
ಐಚರ್ ಟೆಂಪೋ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮತ್ತೊಂದು ಟೆಂಪೋಗೆ ಡಿಕ್ಕಿ ಹೊಡೆದಿದ್ದು, ನಂತರ ಸೇವೆಗಾಗಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಆಂಬ್ಯುಲೆನ್ಸ್‌ಗೆ ಡಿಕ್ಕಿ ಹೊಡೆದಿದೆ.
ಟೆಂಪೋದಲ್ಲಿ ಬೆಂಗಳೂರಿನ ಎಸ್ಕೆಸಿ ಕ್ಯಾಟರಿಂಟ್ನ 15 ಜನ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಸುಮಾರು 19 ಮಂದಿಗೆ ಗಾಯಗಳಾಗಿವೆ ಎಂದು ಎಸ್ಪಿ ಶಿವಾಂಶು ರಜಪೂತ್ ತಿಳಿಸಿದ್ದಾರೆ. ಆಂಬ್ಯುಲೆನ್ಸ್ ಚಾಲಕ ವಿಕ್ರಮ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಟೆಂಪೋದಲ್ಲಿದ್ದ ಇತರ ಇಬ್ಬರು ಸಹ ಸಾವನ್ನಪ್ಪಿದ್ದು ಅವರ ಗುರುತು ಇನ್ನೂ ಪತ್ತೆಯಾಗಿಲ್ಲ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಕೆಜಿಎಫ್, ಬಂಗಾರಪೇಟೆ, ಕೋಲಾರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಟೆಂಪೋದಲ್ಲಿದ್ದ ಪ್ರಯಾಣಿಕರು ಖಾಸಗಿ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಅಡುಗೆ ಕೆಲಸ ಮಾಡುವವರು ಎಂದು ಮೂಲಗಳು ತಿಳಿಸಿವೆ.