ಬೆಳಗಾವಿ: ಅಕ್ರಮ ಸಂಬಂಧ ಶಂಕೆಯಿಂದ ಪತಿಯ ಮೇಲೆ ಪತ್ನಿಯೊಬ್ಬಳು ಕುದಿಯುವ ಎಣ್ಣೆ ಸುರಿದ ಘಟನೆಯೊಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಮಚ್ಚೆಯಲ್ಲಿ ಮಂಗಳವಾರ ನಡೆದಿದೆ.
ಸಂತ್ರಸ್ತ ವ್ಯಕ್ತಿಯನ್ನು ಸುಭಾಷ್ ಹನುಮಂತಗೌಡ ಪಾಟೀಲ್ (57) ಎಂದು ಗುರುತಿಸಲಾಗಿದೆ. ಆರೋಪಿಯನ್ನು ವೈಶಾಲಿ ಸುಭಾಷ್ ಪಾಟೀಲ್ ಎಂದು ಗುರುತಿಸಲಾಗಿದೆ.
ಪತಿಗೆ ವಿವಾಹೇತರ ಸಂಬಂಧವಿದೆ ಎಂದು ಶಂಕಿಸಿದ್ದ ವೈಶಾಲಿ ಪ್ರತೀ ನಿತ್ಯ ಜಗಳವಾಡುತ್ತಿದ್ದಳು. ಅಕ್ಟೋಬರ್ 6 ರಂದು ಮಧ್ಯಾಹ್ನ 12.30 ರ ಸುಮಾರಿಗೆ ಸುಭಾಷ್ ತಮ್ಮ ಮನೆಯ ಅಂಗಳದಲ್ಲಿ ಕುಳಿತಿದ್ದಾಗ. ವೈಶಾಲಿ ಕುದಿಯುವ ಎಣ್ಣೆಯನ್ನು ಸುರಿದಿದ್ದಾಳೆ. ಪರಿಣಾಮ ಸುಭಾಷ್ ಅವರ ಮುಖ, ಎದೆ, ಹೊಟ್ಟೆ, ತೋಳು ಮತ್ತು ತೊಡೆಗೆ ಗಂಭೀರ ಗಾಯಗಳಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದು, ಇಬ್ಬರಿಗೆ ವಿವಾಹವಾಗಿದೆ. ಘಟನೆ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸರು ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.