ಬೆಂಗಳೂರು: ಈ ವರ್ಷ ಈಶಾನ್ಯ ಮುಂಗಾರಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿರುವುದರಿಂದ, ದಕ್ಷಿಣ ಕರ್ನಾಟಕ ಭಾಗದ ರೈತರಿಗೆ ಖುಷಿಯ ಸುದ್ದಿಯಾಗಬಹುದು. ಆದರೆ ಮಳೆ ಮತ್ತು ಪ್ರವಾಹದಿಂದಾಗಿ ಈಗಾಗಲೇ ಭಾರಿ ಬೆಳೆ ನಷ್ಟವನ್ನು ಅನುಭವಿಸಿರುವ ಉತ್ತರ ಒಳನಾಡಿನ ರೈತರಿಗೆ ಇದು ಆತಂಕದ ವಿಷಯವಾಗಿದೆ.
ಈ ವರ್ಷ, ಪೂರ್ವ ಮುಂಗಾರಿನಲ್ಲಿ ರಾಜ್ಯವು ಉತ್ತಮ ಮಳೆಯನ್ನು ಕಂಡಿದೆ. ನೈಋತ್ಯ ಮುಂಗಾರು (ಜೂನ್ ನಿಂದ ಸೆಪ್ಟೆಂಬರ್) ಸಹ ಈ ವರ್ಷ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಪಶ್ಚಿಮ ಮಾನ್ಸೂನ್‌ನಲ್ಲಿ, ರಾಜ್ಯವು ಹಿಂದಿನ ವರ್ಷದ 852 ಮಿ.ಮೀ.ಗಿಂತ ಈ ವರ್ಷ 882 ಮಿ.ಮೀ. ಮಳೆಯನ್ನು ಪಡೆದುಕೊಂಡಿದೆ. ವಿಜಯಪುರ, ಯಾದಗಿರಿ, ಕಲಬುರಗಿಯಂತಹ ಕೆಲವು ಜಿಲ್ಲೆಗಳು, ವಿಶೇಷವಾಗಿ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ಪಡೆದಿದ್ದು, ಇದು ಭಾರೀ ಬೆಳೆ ನಷ್ಟಕ್ಕೆ ಕಾರಣವಾಯಿತು. ಇಲ್ಲಿ ಬೆಳೆಗಳು ಮುಂದಿನ ಎರಡು ವಾರಗಳಲ್ಲಿ ಕೊಯ್ಲಿಗೆ ಬರಬೇಕಿತ್ತು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮಾನಿಟರಿಂಗ್ ಕೇಂದ್ರದ (KSNDMC) ಮಾಜಿ ನಿರ್ದೇಶಕ ಜಿ.ಎಸ್. ಶ್ರೀನಿವಾಸ ರೆಡ್ಡಿ, ತಮಿಳುನಾಡಿಗಿಂತ ಭಿನ್ನವಾಗಿ, ಕರ್ನಾಟಕದಲ್ಲಿ ಈಶಾನ್ಯ ಮುಂಗಾರು ಕೇವಲ ಶೇಕಡಾ 16ರಷ್ಟು ಮಳೆಯಾಗಿದೆ ಮತ್ತು ನೈಋತ್ಯದಿಂದ ಶೇ. 74 ರಷ್ಟು ಮಳೆಯಾಗಿದೆ ಎಂದು ಹೇಳಿದರು.
ರಾಜ್ಯವು ಈಶಾನ್ಯ ಮಾನ್ಸೂನ್ ನ್ನು ಹೆಚ್ಚಾಗಿ ಅವಲಂಬಿಸಿಲ್ಲ. ಆದಾಗ್ಯೂ, ಬೀದರ್, ಕಲಬುರಗಿ ಸೇರಿದಂತೆ ಕಪ್ಪು ಮಣ್ಣಿನಿಂದ ಕೂಡಿದ ಕರ್ನಾಟಕದ ಕೆಲವು ಪ್ರದೇಶಗಳು ಈಶಾನ್ಯ ಮಳೆಯನ್ನು ಅವಲಂಬಿಸಿವೆ. ಸೆಪ್ಟೆಂಬರ್‌ನಲ್ಲಿ ಬಿದ್ದ ಭಾರೀ ಮಳೆಯಿಂದಾಗಿ, ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಖಾರಿಫ್ ಬೆಳೆಗಳು ಹಾನಿಗೊಳಗಾದವು.
ಭಾರೀ ಮಳೆ ಮತ್ತು ನದಿಯ ಉಕ್ಕಿ ಹರಿಯುವಿಕೆಯಿಂದ, ಮಣ್ಣಿನ ತೇವಾಂಶದ ಶುದ್ಧತ್ವ ಹೆಚ್ಚಾಗಿದೆ. ಈಗ, ನಮಗೆ ಹೆಚ್ಚಿನ ಮಳೆ ಬಂದರೆ, ಬಿತ್ತನೆಗೆ ಅನುಕೂಲಕರವಾಗಿರುವುದಿಲ್ಲ ಎಂದು ರೈತರು ಹೇಳುತ್ತಾರೆ.
ಈಗ ಅಣೆಕಟ್ಟುಗಳು ತುಂಬಿವೆ. ಈಶಾನ್ಯ ಮಳೆಯೊಂದಿಗೆ, ಇತರ ಸ್ಥಳಗಳಿಗೆ ನೀರಾವರಿ ಮತ್ತು ಕುಡಿಯುವ ಉದ್ದೇಶಕ್ಕಾಗಿ ಸಾಕಷ್ಟು ನೀರು ಒದಗುತ್ತದೆ ಎಂದರು.
ಸಕಾರಾತ್ಮಕ ಅಂಶವೆಂದರೆ, ವಿಶೇಷವಾಗಿ ದಕ್ಷಿಣ ಒಳನಾಡಿನ ರೈತರು ಮತ್ತೊಂದು ದೀರ್ಘಾವಧಿ ಬೆಳೆಗೆ ಹೋಗಬಹುದು. ಕೃಷಿ ಹವಾಮಾನಶಾಸ್ತ್ರದಲ್ಲಿ ತಜ್ಞ ಮತ್ತು ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ (UAS) ಮಾಜಿ ರಿಜಿಸ್ಟ್ರಾರ್ ಪ್ರೊಫೆಸರ್ ಎಂ.ಬಿ. ರಾಜೇಗೌಡ, ರೈತರು 120 ರಿಂದ 130 ದಿನಗಳ ರಬಿ ಬೆಳೆಗಳನ್ನು ಬೆಳೆಯಬಹುದು ಎನ್ನುತ್ತಾರೆ. ಇದು ಅವರಿಗೆ ಉತ್ತಮ ಇಳುವರಿಯನ್ನು ಪಡೆಯಲು ಸಹಾಯ ಮಾಡುತ್ತದೆ ಎಂದರು.
ಚಿತ್ರದುರ್ಗ, ದಾವಣಗೆರೆಯಲ್ಲಿ ಭಾರಿ ಮಳೆ, ಹಾನಿ
ನಿನ್ನೆ ಮತ್ತು ಮೊನ್ನೆ ಅವಳಿ ಜಿಲ್ಲೆಗಳಾದ ದಾವಣಗೆರೆ ಮತ್ತು ಚಿತ್ರದುರ್ಗವನ್ನು ಮುಳುಗಿಸಿದ ಧಾರಾಕಾರ ಮಳೆಯು ಬೆಳೆಗಳು ಮತ್ತು ಆಸ್ತಿಗಳಿಗೆ ಭಾರಿ ಹಾನಿಯನ್ನುಂಟುಮಾಡಿದೆ. ದಾವಣಗೆರೆಯಲ್ಲಿ, ಗುಡುಗು ಮತ್ತು ಮಿಂಚಿನೊಂದಿಗೆ ಮಳೆಯು ತಡರಾತ್ರಿಯಿಂದ ಪ್ರಾರಂಭವಾಗಿ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಮುಂದುವರಿದಿದ್ದು, ಇದರ ಪರಿಣಾಮವಾಗಿ ಹಲವಾರು ತಗ್ಗು ಪ್ರದೇಶಗಳು ಮುಳುಗಿವೆ.
ಚಳ್ಳಕೆರೆಯ ಹೆಗ್ಗೆರೆ ಮತ್ತು ಕಪರಹಳ್ಳಿಯಲ್ಲಿ, ಖನಿಜಗಳನ್ನು ತುಂಬಿದ ಹಲವಾರು ಟ್ರಕ್‌ಗಳು ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿವೆ. ಚಿತ್ರದುರ್ಗದಲ್ಲಿ ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಆರಂಭವಾದ ಮಳೆ ಗುರುವಾರ ಬೆಳಗ್ಗೆ 5 ಗಂಟೆಯವರೆಗೆ ಮುಂದುವರಿಯಿತು. ಮೆಕ್ಕೆಜೋಳ, ಈರುಳ್ಳಿ ಮತ್ತು ಕಡಲೆಕಾಯಿ ಮುಂತಾದ ಬೆಳೆಗಳು ಕೊಯ್ಲು ಹಂತಕ್ಕೆ ಬರುತ್ತಿದ್ದಂತೆ ಹಾನಿಗೊಳಗಾದವು.