ಬೆಂಗಳೂರು: ಕಾಂತಾರಾ ಸಿನಿಮಾ ಅಭಿಮಾನಿಗಳ ಅತಿರೇಕದ ವರ್ತನೆ ಬಗ್ಗೆ ದೈವಾರಾಧಕರ ಆಕ್ಷೇಪ ತೀವ್ರಗೊಳ್ಳುತ್ತಿದ್ದು, ದೈವಾರಾಧನೆಯ ಅನುಕರಣೆ ವಿರುದ್ಧ ಎಚ್ಚರಿಕೆ ನೀಡಿದ್ದ ದೈವದ ಬಗ್ಗೆಯೇ ಈಗ ಅಪಹಾಸ್ಯ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಸಿನಿಮಾ ನೀಡಿದ ಅಭಿಮಾನಿಗಳು ಕಂಡಕಂಡಲ್ಲಿ ದೈವದ ಅನುಕರಣೆ ಮಾಡುತ್ತಿರುವುದರ ಬಗ್ಗೆ ಬೇಸತ್ತ ದೈವನರ್ತಕರು ದೈವಕ್ಷೇತ್ರದ ಮೊರೆ ಹೋಗಿದ್ದು ನೊಂದು ದೂರು ನೀಡಿದ್ದರು. ದೂರಿಗೆ ದೈವ ಪ್ರತಿಕ್ರಿಯೆ ನೀಡಿದ್ದು, ನನ್ನ ಹೆಸರಿನಲ್ಲಿ ಹಣ ಮಾಡುತ್ತಿರುವವರನ್ನು ನಾನು ನೋಡಿಕೊಳ್ಳುತ್ತೇನೆ. ಹಣವೆಲ್ಲ ಆಸ್ಪತ್ರೆ ಸೇರುವಂತೆ ಮಾಡುತ್ತೇನೆ. ಅಪಚಾರ ಮಾಡುವವರಿಗೆ ನಾನು ಬುದ್ದಿ ಕಲಿಸುತ್ತೇನೆ ಎಂದು ಎಚ್ಚರಿಕೆ ನೀಡಿತ್ತು.
ಬಜಪೆಯ ಪೆರಾರದ ಪಿಲ್ಚಂಡಿ ದೈವವು 'ಹುಚ್ಚು ಕಟ್ಟಿದವರನ್ನ ಹುಚ್ಚು ಹಿಡಿಸುತ್ತೇನೆ' ಮತ್ತು 'ದೈವದ ಹೆಸರಿನಲ್ಲಿ ಮಾಡಿದ ದುಡ್ಡನ್ನು ಆಸ್ಪತ್ರೆಗೆ ಸುರಿಸುತ್ತೇನೆ' ಎಂದು ನುಡಿದಿದ್ದು, ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಕೆಲವರು ದೈವದ ನುಡಿ ಬಗ್ಗೆಯೇ ಅಪಹಾಸ್ಯ ಮಾಡುತ್ತಿದ್ದಾರೆ. ಕಾಂತಾರ ಸಿನಿಮಾದ ಡೈಲಾಗ್‌ಗಳನ್ನು ಬಳಸಿಕೊಂಡು ಇದನ್ನು 'ದೈವ ಹೇಳಿದ್ದಾ, ದೈವ ನರ್ತಕ ಹೇಳಿದ್ದಾ?' ಎಂದು ಪ್ರಶ್ನಿಸುವ ಮೂಲಕ ದೈವ ವಾಕ್ಯವನ್ನೇ ಅಪಹಾಸ್ಯ ಮಾಡುತ್ತಿದ್ದಾರೆ.
ಕಾಂತಾರ ಅಭಿಮಾನಿಗಳು ರಿಷಬ್ ಶೆಟ್ಟಿ ದೈವದ ಒಪ್ಪಿಗೆ ಪಡೆದೇ ಸಿನಿಮಾ ಮಾಡಿದ್ದಾರೆ ಎಂದು ವಾದಿಸುತ್ತಿದ್ದರೆ, ದೈವಾರಾಧಕರು ದೈವದ ಕುರಿತು ಅಪಹಾಸ್ಯ ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ವಿಷಯ ಕರಾವಳಿಯಲ್ಲಿ ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದೆ.