ಜಿಬಿಎ ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ 
ರಾಜ್ಯ

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ- ಡಿಕೆಶಿ ಸವಾಲು

ಸ್ಥಾಯಿ ಸಮಿತಿ ವೆಚ್ಚದ ಮಿತಿಯನ್ನು 3 ಕೋಟಿ ರೂಪಾಯಿಯಿಂದ 5 ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ. ಐದು ಪಾಲಿಕೆಗಳ ಸ್ಥಾಯಿ ಸಮಿತಿಗಾಗಿ 25 ಕೋಟಿ ನೀಡಲಾಗುವುದು.

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನಗರದ ಯೋಜನಾ ಪ್ರಾಧಿಕಾರದ ಜವಾಬ್ದಾರಿ, ಟಿಡಿಆರ್ ನೀಡುವ ಅಧಿಕಾರವನ್ನು ನೀಡಲಾಗಿದೆ. ಬಿಡಿಎಯಿಂದ ಈ ಅಧಿಕಾರವನ್ನು ಜಿಬಿಎಗೆ ಹಸ್ತಾಂತರಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಜಿಬಿಎ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಮಿತಿಯ ಮೊದಲ ಸಭೆಯಲ್ಲಿ ಹಾಗೂ ಸಭೆಗೂ ಮುನ್ನ ಹಾಗೂ ಸಭೆ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. ಐದು ಪಾಲಿಕೆಗಳ ಕಟ್ಟಡ ನಿರ್ಮಾಣಕ್ಕೆ ಜಾಗಗಳನ್ನು ಗುರುತಿಸಲಾಗಿದೆ. ಬಿಬಿಎಂಪಿ ಮುಖ್ಯಕಚೇರಿಯಾಗಿದ್ದ ಕಟ್ಟಡವು ಜಿಬಿಎ ಕಚೇರಿಯಾಗಿರುತ್ತದೆ.

ಬೆಂಗಳೂರು ಕೇಂದ್ರ ಸೇರಿದಂತೆ ನೂತನ ಕಟ್ಟಡ ನಿರ್ಮಾಣ ಆಗುವವರೆಗೂ ಬೇರೆ ಪಾಲಿಕಾಗಳ ಸಭೆಗೆ ಇದೇ ಕಟ್ಟಡದಲ್ಲಿ ಅವಕಾಶ ಮಾಡಿಕೊಡಲಾಗುವುದು. ಇನ್ನು ಎಲ್ಲಾ ಐದು ಪಾಲಿಕೆಗಳ ಕಟ್ಟಡ ವಿನ್ಯಾಸ ಒಂದೇ ರೀತಿ ಇರಲಿದೆ ಎಂದು ತಿಳಿಸಿದರು. ಇಂದು ಪಾಲಿಕೆ ಸಮಿತಿಯ ವೆಚ್ಚದ ಹಣಕಾಸಿನ ಮಿತಿ ಹೆಚ್ಚಿಸಲಾಗಿದೆ. ಪಾಲಿಕೆ ಆಯುಕ್ತರುಗಳ ವೆಚ್ಚದ ಮಿತಿಯನ್ನು 1 ಕೋಟಿ ರೂಪಾಯಿಯಿಂದ 3 ಕೋಟಿ ರೂ. ಏರಿಸಲಾಗಿದೆ. ಆಮೂಲಕ ಐದು ಪಾಲಿಕೆಗಳ ಆಯುಕ್ತರಿಗೆ 15 ಕೋಟಿ ರೂ. ನೀಡಲಾಗುವುದು.

ಸ್ಥಾಯಿ ಸಮಿತಿ ವೆಚ್ಚದ ಮಿತಿಯನ್ನು 3 ಕೋಟಿ ರೂಪಾಯಿಯಿಂದ 5 ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ. ಐದು ಪಾಲಿಕೆಗಳ ಸ್ಥಾಯಿ ಸಮಿತಿಗಾಗಿ 25 ಕೋಟಿ ನೀಡಲಾಗುವುದು. ಇನ್ನು ಪಾಲಿಕೆ ಮೇಯರ್ ಅವರ ವೆಚ್ಚದ ಮಿತಿಯನ್ನು 5 ಕೋಟಿಯಿಂದ 10 ಕೋಟಿಗೆ ಏರಿಸಲಾಗಿದ್ದು, ಐದು ಪಾಲಿಕೆಗಳಿಂದ 50 ಕೋಟಿ ರೂ. ಆಗಲಿದೆ. ಇದೊಂದು ಐತಿಹಾಸಿಕ ತೀರ್ಮಾನ ಎಂದು ತಿಳಿಸಿದರು.

ಬೆಂಗಳೂರಿಗೆ ಹೊಸ ರೂಪ ನೀಡಲು ನಮ್ಮ ಸರ್ಕಾರ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ಶಾಸಕರು ಹಾಗೂ ಜನರ ಅಭಿಪ್ರಾಯ ಸಂಗ್ರಹಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆಯನ್ನು ರೂಪಿಸಿ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಅನುಮೋದನೆ ಪಡೆಯಿತು. ಏ.23ರಂದು ರಾಜ್ಯಪಾಲರು ಜಿಬಿಎ ಕಾಯ್ದೆಗೆ ಒಪ್ಪಿಗೆ ನೀಡಿದ್ದು, ಸರ್ಕಾರ ಹಾಗೂ ಬೆಂಗಳೂರಿನ ನಾಗರೀಕರ ಪರವಾಗಿ ಘನವೆತ್ತ ರಾಜ್ಯಪಾಲರಿಗೆ ಧನ್ಯವಾದ ತಿಳಿಸುತ್ತೇನೆ. ಮೇ 15ರಂದು ಸರ್ಕಾರ ಜಿಬಿಎ ಕಾಯ್ದೆ ಜಾರಿಗೆ ತಂದು, ಜು.25ರಂದು ಜಿಬಿಎ ಅಡಿಯಲ್ಲಿ ಬೆಂಗಳೂರಿನಲ್ಲಿ ಐದು ಪಾಲಿಕೆ ರಚಿಸಲು ಅಧಿಸೂಚನೆ ಹೊರಡಿಸಲಾಯಿತು ಎಂದು ಹೇಳಿದರು.

ಸೆ.2ರಂದು ಈ ಪಾಲಿಕೆಗಳ ರಚನೆ ಆದೇಶ ಹೊರಡಿಸಲಾಗಿದ್ದು, ನಂತರ ಐದು ಪಾಲಿಕೆಗಳಿಗೆ ಆಯುಕ್ತರನ್ನು ನೇಮಿಸಲಾಗಿದೆ. ಬೆಂಗಳೂರು ಕೇಂದ್ರ ಪಾಲಿಕೆಯಲ್ಲಿ 50, ಬೆಂಗಳೂರು ದಕ್ಷಿಣಕ್ಕೆ 72, ಬೆಂಗಳೂರು ಪೂರ್ವಕ್ಕೆ 63, ಬೆಂಗಳೂರು ಪಶ್ಚಿಮದಲ್ಲಿ 111, ಬೆಂಗಳೂರು ಉತ್ತರದಲ್ಲಿ 72 ವಾರ್ಡ್ ಸೇರಿ ಒಟ್ಟು 368 ವಾರ್ಡ್ ಗಳನ್ನು ರಚಿಸಲಾಗಿದೆ. ಈ ಹಿಂದೆ 198 ವಾರ್ಡ್ ಇದ್ದವು, ಈಗ 368 ವಾರ್ಡ್ ಆಗಿವೆ. ಈ ವಾರ್ಡ್ ವಿಂಗಡಣೆ ಬಗ್ಗೆ ಸಾರ್ವಜನಿಕರ ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

74ನೇ ತಿದ್ದುಪಡಿ ಉಲ್ಲಂಘನೆ ಆಗದಂತೆ ನಾವು ಈ ಪಾಲಿಕೆಗಳನ್ನು ರಚಿಸಿದ್ದೇವೆ. ಬೆಂಗಳೂರಿನಲ್ಲಿ ಉತ್ತಮ ಆಡಳಿತ ನೀಡಿ, ಸರ್ಕಾರವನ್ನು ಜನರ ಬಳಿಗೆ ತೆಗೆದು ಕೊಂಡುಹೋಗಬೇಕು. ಬೆಂಗಳೂರು ರಾಜ್ಯದ ಹೃದಯ ಭಾಗ. ಇಲ್ಲಿ 1.40 ಕೋಟಿ ಜನಸಂಖ್ಯೆ ಇದೆ. ಸಂಚಾರ ದಟ್ಟಣೆ ಸೇರಿದಂತೆ ಅನೇಕ ಸಮಸ್ಯೆ ಬಗೆಹರಿಸಲು ಈ ಜಿಬಿಎ ರಚಿಸಲಾಗಿದೆ ಮಾಡಲಾಗಿದೆ. ಸರ್ಕಾರದ ಸಹಕಾರ ಇಲ್ಲದೆ ಯಾವುದೇ ಪಾಲಿಕೆ ಯಶಸ್ವಿಯಾಗಿ ಆಡಳಿತ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ತೀರ್ಮಾನ ಮಾಡಿದ್ದೇವೆ. ಆಮೂಲಕ ಬೆಂಗಳೂರು ಹೊಸ ಇತಿಹಾಸ ಪುಟಕ್ಕೆ ಸೇರಿದೆ ಎಂದರು.

ಪಾಲಿಕೆ ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಪಕ್ಷ ಗೆದ್ದರು ಸರ್ಕಾರದ ಶ್ರೀರಕ್ಷೆ ಸದಾ ಪಾಲಿಕೆ ಮೇಲೆ ಇರಬೇಕು. ಎಲ್ಲಾ ಸಂದರ್ಭಗಳಲ್ಲಿ ಅನುದಾನದ ನೆರವು ಇರಬೇಕು ಎಂದು ಮುಖ್ಯಮಂತ್ರಿಗಳನ್ನು ಜಿಬಿಎ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಜಿಬಿಎ ಸಮಿತಿಯಲ್ಲಿ ಬಿಡಿಎ, ಬಿಎಂಆರ್ ಡಿಎ, ಬೆಸ್ಕಾಂ, ಬಿಡಬ್ಯೂಎಸ್ ಎಸ್ ಬಿ ಸೇರಿದಂತೆ ಇನ್ನು ಅನೇಕ ಸಂಸ್ಥೆಗಳ ಕಮಿಷನರ್, ಪೊಲೀಸ್ ಆಯುಕ್ತರು, ಸಂಚಾರಿ ಪೊಲೀಸ್ ಕಮಿಷನರ್, ಎಲ್ಲಾ ಅಧಿಕಾರಿಗಳು ಸದಸ್ಯರಾಗಿ ಇರುತ್ತಾರೆ. ಬೆಂಗಳೂರಿನ ಜನಪ್ರತಿನಿಧಿಗಳು ಹಾಗೂ ಬೆಂಗಳೂರಿನಲ್ಲಿ ಮತದಾನದ ಹಕ್ಕು ಹೊಂದಿರುವ ಎಲ್ಲಾ ಜನಪ್ರತಿನಿಧಿಗಳ ಜೊತೆಗೆ ಬೆಂಗಳೂರಿನಲ್ಲಿ ವಾಸಿಸುವ ಲೋಕಸಭಾ ಸದಸ್ಯರು, ಮುಖ್ಯ ಕಾರ್ಯದರ್ಶಿ ಹಾಗೂ ಎಸಿಎಸ್ ಅಧಿಕಾರಿಗಳನ್ನು ಈ ಸಮಿತಿಯಲ್ಲಿ ಸೇರಿಸುವ ಬಗ್ಗೆ ಇಂದು ತೀರ್ಮಾನ ಮಾಡಲಾಗಿದೆ” ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಹೊಸ ದಿಕ್ಕು ನೀಡಲು, ಈ ಸಭೆಯಲ್ಲಿ ಜಿಬಿಎ ಸಮಿತಿ ಸದಸ್ಯರು ತಮ್ಮ ಅಭಿಪ್ರಾಯ ತಿಳಿಸಬಹುದು. ಇಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ. ನಿಮ್ಮ ಸಲಹೆಗಳನ್ನು ಸ್ವೀಕರಿಸಲು ಸರ್ಕಾರ ಸಿದ್ಧವಿದೆ. ನಾವು ಎಲ್ಲಾ ಆಸ್ತಿ ಡಿಜಿಟಲೀಕರಣ ಮಾಡಲಾಗುತ್ತಿದ್ದು, ಸುಮಾರು 2 ಸಾವಿರ ಕೋಟಿ ಆದಾಯ ಹೆಚ್ಚಳದ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಈ ವರ್ಷ 6200 ಕೋಟಿ ಆದಾಯ ಬಂದಿದ್ದು, ದೆಹಲಿಯಲ್ಲಿ ಕೇವಲ 2 ಸಾವಿರ ಕೋಟಿ ಮಾತ್ರ ಆದಾಯವಿದೆ” ಎಂದು ಹೇಳಿದರು.

“ವಿಧಾನಸಭೆ, ವಿಧಾನ ಪರಿಷತ್ ನಲ್ಲಿ ಹಾಗೂ ಜಂಟಿ ಸದನ ಸಮಿತಿ ಮೂಲಕ ನಡೆದ 21 ಸಭೆಗಳಲ್ಲಿ ಎಲ್ಲಾ ಪಕ್ಷದವರ ಸಲಹೆ ಸ್ವೀಕರಿಸಿ ಈ ಜಿಬಿಎ ರಚಿಸಲಾಗಿದೆ. ವಿರೋಧ ಪಕ್ಷಗಳ ನಾಯಕರು ಆಂತರಿಕವಾಗಿ ಜಿಬಿಎ ವಿಚಾರವಾಗಿ ಸಂತೋಷವಾಗಿದ್ದಾರೆ. ಆದರೆ ರಾಜಕೀಯ ಉದ್ದೇಶದಿಂದ ಇದನ್ನು ಟೀಕೆ ಮಾಡುತ್ತಿದ್ದಾರೆ” ಎಂದು ತಿಳಿಸಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಬಿಎ ರದ್ದು ಮಾಡಲಾಗುವುದು, ಸಭೆಯ ಅಜೆಂಡಾವನ್ನೇ ತಿಳಿಸಿಲ್ಲ ಎಂಬ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಬಹಳ ಸಂತೋಷ. ಮೊದಲ ಸಭೆಯಲ್ಲಿ ಅಜೆಂಡಾ ಇರುವುದಿಲ್ಲ. ಜಿಬಿಎ ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ತೀರ್ಮಾನವನ್ನು ಮೊದಲ ಸಭೆಯಲ್ಲಿ ಮಾಡಲಾಗುವುದು. ಈ ಸಭೆಗೆ ಗೈರಾಗುವ ಮೂಲಕ ಬಿಜೆಪಿ ನಾಯಕರು ಬೆಂಗಳೂರು ನಗರದ ವಿರುದ್ಧವಾಗಿ ನಿಂತಿದ್ದಾರೆ. ಜನರು ಕೊಟ್ಟ ಅಧಿಕಾರಕ್ಕೆ ದ್ರೋಹ ಬಗೆದಿದ್ದಾರೆ. ಜನರ ಪರವಾಗಿ ಧ್ವನಿ ಎತ್ತುವುದಕ್ಕಿಂತ ಅವರಿಗೆ ರಾಜಕಾರಣ ಮುಖ್ಯವಾಗಿದೆ.

ಅವರ ಈ ನಡೆಗೆ ವಿಷಾದ ವ್ಯಕ್ತಪಡಿಸುತ್ತೇವೆ. ಇನ್ನು ಜಿಬಿಎ ರದ್ದುಗೊಳಿಸುವ ವಿಚಾರವಾಗಿ ಹೇಳುವುದಾದರೆ, ಕಾಂಗ್ರೆಸ್ ಸರ್ಕಾರದ ತೀರ್ಮಾಣವನ್ನು ಯಾವುದೇ ಬೇರೆ ಸರ್ಕಾರ ಬದಲಾವಣೆ ಮಾಡಲು ಸಾಧ್ಯವಾಗಿಲ್ಲ. ಭೂಸುಧಾರಣಾ ಕಾಯ್ದೆಯಿಂದ ಬ್ಯಾಂಕುಗಳ ರಾಷ್ಟ್ರೀಕರಣ, ಆಹಾರ ಭದ್ರತೆ, ಉದ್ಯೋಗ ಖಾತ್ರಿ, ಶೈಕ್ಷಣಿಕ ಹಕ್ಕು ಸೇರಿದಂತೆ ಗ್ಯಾರಂಟಿ ಯೋಜನೆಗಳವರೆಗೂ ಕಾಂಗ್ರೆಸ್ ಸರ್ಕಾರಗಳ ತೀರ್ಮಾನವನ್ನು ಬದಲಿಸಲು ಸಾಧ್ಯವಾಗಿಲ್ಲ. ಅವರು ಜಿಬಿಎ ವಿರುದ್ಧ ಪ್ರತಿಭಟಿಸುವುದೇ ಆದರೆ, ಅವರು ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಬಹಿಷ್ಕರಿಸಲಿ. ಅವರು ಏನಾದರೂ ಟೀಕೆ ಮಾಡಲಿ ನಾವು ನಮ್ಮ ಜನಪರ ಕೆಲಸ ಮುಂದುವರಿಸುತ್ತೇವೆ” ಎಂದು ತಿರುಗೇಟು ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT