ಬೆಂಗಳೂರು: ಖಾಸಗಿ ಕಾಲೇಜಿನ ಪ್ರಾಧ್ಯಾಪಕರ ಮನೆಗೆ ಭ್ರಷ್ಟಾಚಾರ ನಿಗ್ರಹ ದಳದ ಸೋಗಿನಲ್ಲಿ ದಾಳಿ ನಡೆಸಿ 1.5 ಕೋಟಿ ರೂ. ನಗದು ಮತ್ತು 50 ಗ್ರಾಂ ಚಿನ್ನದ ಆಭರಣಗಳನ್ನು ದೋಚಿದ್ದ ಮಾಜಿ ಕಾರು ಚಾಲಕ ಸೇರಿ ಏಳು ಮಂದಿ ಆರೋಪಿಗಳನ್ನು ಯಲಹಂಕ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ಉಪನ್ಯಾಸಕರ ಮಾಜಿ ಚಾಲಕ ಮತ್ತು ದೊಮ್ಮಲೂರಿನ ನಿವಾಸಿ ಶಂಕರ್ (48); ಆಂಧ್ರಪ್ರದೇಶ ಮೂಲದ ಜಗನ್ ಮೋಹನ್ (54) ಮತ್ತು ಅವರ ಸಹೋದರ ಶ್ರೀನಿವಾಸ್ ಎಸ್ (44), ಯಲಹಂಕದಲ್ಲಿ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕಚೇರಿಯನ್ನು ನಡೆಸುತ್ತಿರುವ ರಾಜೇಂದ್ರ ಮುನಿತ್ ಜೈನ್ (42); ಕಿರಣ್ ಕುಮಾರ್ ಜೈನ್ (51) ಮತ್ತು ಹೇಮಂತ್ ಕುಮಾರ್ ಜೈನ್ (42) ಎಂದು ಗುರ್ತಿಸಲಾಗಿದೆ. ಆರೋಪಿಗಳಿಂದ 1.27 ಕೋಟಿ ರು. ನಗದು ಹಾಗೂ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಕಟ್ಟಿಗೇನಹಳ್ಳಿಯ ವಿನಾಯಕ ನಗರದಲ್ಲಿ ನೆಲೆಸಿರುವ ಖಾಸಗಿ ಕಾಲೇಜಿನ ಪ್ರಾಧ್ಯಾಪಕ ಗಿರಿರಾಜ್ ಅವರ ಮನೆಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಸೋಗಿನಲ್ಲಿ ನುಗ್ಗಿ ದುಷ್ಕರ್ಮಿ ಗಳು ದರೋಡೆ ನಡೆಸಿದ್ದರು.
ಈ ಕೃತ್ಯದ ತನಿಖೆಗಿಳಿದ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ಸಾರಥ್ಯದಲ್ಲಿ ಸಬ್ ಇನ್ಸ್‌ಪೆಕ್ಟರ್ ಮಧುಸೂದನ್ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಪ್ರಾಧ್ಯಾಪಕರ ಮಾಜಿ ಕಾರು ಚಾಲಕ ಶಂಕರ್‌ಸೇರಿ ಏಳು ಮಂದಿಯನ್ನು ಬಂಧಿಸಿದೆ.
ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಗಿರಿರಾಜ್ ಅವರು ತಮ್ಮ ಕುಟುಂಬದ ಜತೆ ವಿನಾಯಕ ನಗರದಲ್ಲಿ ನೆಲೆಸಿದ್ದಾರೆ. ಪ್ರಾಧ್ಯಾಪಕರ ಮನೆಯಲ್ಲಿ ಕಾರು ಚಾಲಕನಾಗಿದ್ದ ದೊಮ್ಮಲೂರಿನ ಶಂಕರ್, ಕೆಲ ದಿನಗಳ ಹಿಂದಷ್ಟೇ ಅಲ್ಲಿ ಕೆಲಸ ತೊರೆದಿದ್ದ. ಆತನಿಗೆ ಕಾರು ಚಾಲಕನಾಗಿದ್ದಾಗ ಗಿರಿರಾಜ್ ಅವರ ಆರ್ಥಿಕ ವಹಿವಾಟಿನ ಮಾಹಿತಿ ತಿಳಿದಿತ್ತು. ಇದರಂತೆ ಇತ್ತೀಚೆಗೆ ಜಮೀನು ಮಾರಾಟ ಸಂಬಂಧ 1.5 ಕೋಟಿ ರು. ಹಣವು ಗಿರಿರಾಜ್ ಅವರ ಮನೆಯಲ್ಲಿದ್ದ ವಿಚಾರ ಶಂಕರ್‌ಗೆ ಗೊತ್ತಾಗಿ ಹಣ ದೋಚಲು ತನ್ನ ಸ್ನೇಹಿತರ ಜೊತೆಗೂಡಿ ಆತ ಸಂಚು ರೂಪಿಸಿ ಕಾರ್ಯರೂಪಕ್ಕಿಳಿಸಿದ್ದ.
ಇದರಂತೆ ಸೆ.19 ರಂದು ಗಿರಿರಾಜ್ ಅವರ ಮನೆಗೆ ಕಾರಿನಲ್ಲಿ ಸೂಟು ಬೂಟು ಹಾಕಿಕೊಂಡು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಸೋಗಿನಲ್ಲಿ ಆರೋಪಿಗಳ ಪೈಕಿ ರಾಜೇಂದ್ರ ಸೇರಿ ನಾಲ್ವರು ನುಗ್ಗಿದ್ದರು.
ಆಗ ಮನೆ ಹೊರಗೆ ನಿಂತು ಶಂಕರ್ ಸೇರಿ ಇನ್ನುಳಿದವರು ಹೊರಗಿನ ಚಲನವಲನದ ಮೇಲೆ ನಿಗಾವಹಿಸಿದ್ದರು. ಬಳಿಕ ತಾವು ಇ.ಡಿ.ಅಧಿಕಾರಿಗಳು. ನೀವು ಅಕ್ರಮ ವ್ಯವಹಾರದಿಂದ ಹಣ ಸಂಪಾದಿಸಿರುವ ಮಾಹಿತಿ ಇದೆ. ಅದಕ್ಕೆ ಮನೆ ದಾಳಿ ಮಾಡಿದ್ದೇವೆ ಎಂದು ಹೇಳಿ ಮನೆ ಶೋಧಿಸಿದ್ದರು. ಕೊನೆಗೆ ಮನೆಯಲ್ಲಿದ್ದ 1.5 ಕೋಟಿ ರು. ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಬಳಿಕ ಅಸಲಿಯತ್ತು ತಿಳಿದ ಗಿರಿರಾಜ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳು ನಕಲಿ ನಂಬರ್ ಪ್ಲೇಟ್ ಬಳಸಿದ್ದರು. ಪ್ರಕರಣ ಸಂಬಂಧ 7 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಓರ್ವ ಇನ್ನೂ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳಿಂದ 1.27 ಕೋಟಿ ರೂಪಾಯಿ ನಗದು ಮತ್ತು ಹಲವಾರು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.