ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯಲ್ಲಿ ಐದು ಪಾಲಿಕೆಗಳ ಚುನಾವಣೆ ಸಾಕಷ್ಟು ಸವಾಲುಗಳನ್ನು ಎದುರು ಮಾಡುವ ಸಾಧ್ಯತೆಗಳಿದ್ದು, ಆಡಳಿತ ವಿರೋಧಿ ಅಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ಕಾಂಗ್ರೆಸ್‌ನ ಚುನಾವಣಾ ತಂತ್ರಜ್ಞ ಸುನಿಲ್ ಕನುಗೋಲು ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಯಾವುದೇ ಆಡಳಿತ ವಿರೋಧಿ ಅಲೆಯನ್ನು ಎದುರಿಸಲು ವಿಶೇಷ ತಂತ್ರವನ್ನು ಅಳವಡಿಸಿಕೊಳ್ಳುವ ಕುರಿತು ಚಿಂತನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಈಗಾಗಲೇ ವಾಸ್ತವ ಸ್ಥಿತಿಯ ಕುರಿತು ಸಮೀಕ್ಷೆ ನಡೆಸಿರುವ ಕನುಗೋಲು ಅವರ ತಂಡ, ಚುನಾವಣೆ ಹಲವು ಸಲಹೆಗಳನ್ನು ನೀಡಿದ್ದು, ಆಡಳಿತ ವಿರೋಧಿ ಅಲೆ ಚುನಾವಣೆ ಮೇಲೆ ಪರಿಣಾಮ ಬೀರುವ ಸುಳಿವನ್ನೂ ನೀಡಿದೆ.
ಹೀಗಾಗಿ, ವರದಿಗಳು ಕಾಂಗ್ರೆಸ್ ಪಕ್ಷಕ್ಕೆ ಗ್ರೇಟರ್ ಬೆಂಗಳೂರು ಚುನಾವಣೆ ಅಗ್ನಿಪರೀಕ್ಷೆಯಾಗಲಿದೆ ಎಂದು ಹೇಳಾಗುತ್ತಿದೆ. ಈ ನಡುವೆ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಮತದಾರರ ಭಾವನೆಯ ಮೇಲೆ ಯಾವುದೇ ಪ್ರಭಾವ ಬೀರಿವೆಯೇ ಎಂಬುದನ್ನು ಕೂಡ ಪರಿಶೀಲಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಡಿಕೆ.ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿದ್ದು, ಐದು ಪಾಲಿಕೆಗಳಲ್ಲಿ ಕನಿಷ್ಠ 2-3 ರಲ್ಲಿ ಗೆಲುವುದು ಸಾಧಿಸುವಂತೆ ಮಾಡುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಚುನಾವಣೆ ಡಿಕೆ.ಶಿವಕುಮಾರ್ ಅವರಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಬೆಂಗಳೂರು ಕೇಂದ್ರ (63 ವಾರ್ಡ್‌ಗಳು) ಮತ್ತು ಬೆಂಗಳೂರು ಉತ್ತರ (72) ಗಳಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿದ್ದು, ಇಲ್ಲಿ ಗೆಲ್ಲುವ ವಿಶ್ವಾಸವಿದೆ. ಆದರೆ, ಇನ್ನುಳಿದ 3 ಕ್ಷೇತ್ರಗಳು ಕಾಂಗ್ರೆಸ್ ಪಕ್ಷಕ್ಕೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ರಸ್ತೆ ಗುಂಡಿ ಸಮಸ್ಯೆ ಸೇರಿದಂತೆ ಇತರೆ ಕುಂದುಕೊರತೆಗಳ ದೂರಾಗಿಸಿ, ಮತದಾರರನ್ನು ಓಲೈಸುವ ಎಚ್ಚರಿಕೆ ನಡೆಗಳನ್ನು ಇಡುತ್ತಿದ್ದಾರೆಂದು ತಿಳಿದುಬಂದಿದೆ.
ಈ ನಿಟ್ಟಿನಲ್ಲಿ ಈಗಾಗಲೇ ಮೊದಲ ಹೆಜ್ಜೆಯನ್ನು ಡಿಕೆ.ಶಿವಕುಮಾರ್ ಅವರು, ಮಾಜಿಕ-ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಸಮಯದಲ್ಲಿ ಗಣತಿದಾರರು ನಾಗರಿಕರಿಗೆ "ಮುಜುಗರದ" ಪ್ರಶ್ನೆಗಳನ್ನು ಕೇಳಬಾರದು ಎಂದು ನಿರ್ದೇಶಿಸಿದ್ದಾರೆ.
ಈತನ್ಮಧ್ಯೆ ಗುತ್ತಿಗೆದಾರರ ಕೋಪವನ್ನೂ ಕಾಂಗ್ರೆಸ್ ಎದುರಿಸಬೇಕಾಗಿದೆ. ಅಪಾರ್ಟ್ಮೆಂಟ್ ಮತ್ತು ಇತರ ನಿರ್ಮಾಣ ಯೋಜನೆಗಳಿಗೆ ಎನ್ಒಸಿ ಪಡೆಯುವ ಕುರಿತು ಸರ್ಕಾರ ಈಗಾಗಲೇ ಟೀಕೆಗಳನ್ನು ಎದುರಿಸಿದೆ ಎಂದು ಸಿದ್ದರಾಮಯ್ಯ ಬಣದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಚುನಾವಣೆಯಲ್ಲಿ ಶತಾಯಗತಾಯ ಗೆಲುವು ಸಾಧಿಸಲು ಡಿಕೆ.ಶಿವಕುಮರ್ ಶ್ರಮಿಸುತ್ತಿದ್ದು, ಈ ನಿಟ್ಟಿನಲ್ಲಿ ಬೆಂಗಳೂರು ನಗರ ಸಚಿವರಾದ ರಾಮಲಿಂಗಾ ರೆಡ್ಡಿ, ಕೆಜೆ ಜಾರ್ಜ್, ಬೈರತಿ ಸುರೇಶ್, ಜಮೀರ್ ಅಹ್ಮದ್ ಖಾನ್ ಮತ್ತು ಕೃಷ್ಣ ಬೈರೇಗೌಡ ಸೇರಿದಂತೆ ಪಕ್ಷದ ನಾಯಕರೊಂದಿಗೆ ಚುನಾವಣೆಯ ಮೇಲ್ವಿಚಾರಣೆಗೆ ಸಮಿತಿಗಳನ್ನು ರಚಿಸುತ್ತಿದ್ದಾರೆ.
ಒಂದೊಂದು ಪಾಲಿಕೆಯನ್ನು ಗುರಿಯಾಗಿಟ್ಟುಕೊಂಡು ಐದು ವಿಶೇಷ ಪ್ರಣಾಳಿಕೆಗಳನ್ನು ಸಿದ್ಧಪಡಿಸಲಾಗುವುದು ಎಂದು ಡಿಕೆ.ಶಿವಕುಮಾರ್ ಅವರ ಆಪ್ತ ಹಾಗೂ ರಾಜ್ಯಸಭಾ ಸದಸ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿಸಿ ಚಂದ್ರಶೇಖರ್ ಅವರು ಹೇಳಿದ್ದಾರೆ.
ಪಕ್ಷದ ವಿರುದ್ಧ ಕೆಲಸ ಮಾಡುವ ಆಡಳಿತ ವಿರೋಧಿ ಅಂಶಗಳನ್ನು ನಿಭಾಯಿಸಲು ನಾವು ಒಂದು ಕಾರ್ಯತಂತ್ರವನ್ನು ರೂಪಿಸುತ್ತೇವೆ. ಐದು ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ಸ್ಥಾಪಿಸಲಾಗುವುದು, ಪ್ರತಿಯೊಂದರ ನೇತೃತ್ವವನ್ನು ಮಹಿಳಾ ನಾಯಕಿ ವಹಿಸುತ್ತಾರೆ, ಇವರು ಯೋಜನೆಗಳ ಪ್ರಯೋಜನಗಳು ಫಲಾನುಭವಿಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುತ್ತಾರೆಂದು ಹೇಳಿದ್ದಾರೆ.
ಈ ನಡುವೆ ವಾರ್ಡ್ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆ ನವೆಂಬರ್‌ನಲ್ಲಿ ಪೂರ್ಣಗೊಳ್ಳಲಿದ್ದು, ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.