ಬೆಂಗಳೂರು: ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯ ಭೀಮೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಈ ದುರ್ಘಟನೆ ಅಕ್ಟೋಬರ್ 7ರಂದು ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಭೀಮನಹಳ್ಳಿ ಸಮೀಪದ ಶೆಡ್‌ನಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ 7 ಕಾರ್ಮಿಕರು ಈ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅವರಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ.
ಮೃತರನ್ನು ಮನಾರುಲ್ ಶೇಖ್ (40), ತಜಬುಲ್ ಶೇಖ್ (26), ಜಹೇದ್ ಅಲಿ (32), ಹಸನ್ ಮಲಿಕ್ (42), ಜಿಯಾಬುರ್ ಶೇಖ್ (40), ಮತ್ತು ಶಫಿಜುಲ್ ಶೇಖ್ (36) ಎಂದು ಗುರ್ತಿಸಲಾಗಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ನೂರ್ ಜಮಾಲ್ (21) ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇವರೆಲ್ಲರೂ ಪಶ್ಚಿಮ ಬಂಗಾಳದವರಾಗಿದ್ದು, ನಿರ್ಮಾಣ ಸ್ಥಳದಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಮಂಗಳವಾರ ಬೆಳಗಿನ ಜಾವ 2.30 ರ ಸುಮಾರಿಗೆ, ಊಟದ ನಂತರ ಕಾರ್ಮಿಕರು ಮಲಗಿದ್ದ ಶೆಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಅಡುಗೆ ಮಾಡಿದ ನಂತರ ಶೆಡ್‌ನೊಳಗಿನ ಎಲ್‌ಪಿಜಿ ಸಿಲಿಂಡರ್ ಅನ್ನು ಸರಿಯಾಗಿ ಆಫ್ ಮಾಡದ ಕಾರಣ ಅನಿಲ ಸೋರಿಕೆಯಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ನಡುವೆ ರಾತ್ರಿ ವೇಳೆ ಕಾರ್ಮಿಕರಲ್ಲಿ ಒಬ್ಬರು ಸಿಗರೇಟ್ ಹಚ್ಚಿದಾಗ, ಅದು ಸ್ಫೋಟ ಮತ್ತು ಬೆಂಕಿಗೆ ಕಾರಣವಾಯಿತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಭೂಮಾಲೀಕರು, ಸೈಟ್ ಎಂಜಿನಿಯರ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.