ಬೆಂಗಳೂರು: ಬಸವತತ್ವದ ವಿರುದ್ಧ ಹೇಳಿಕೆ ನೀಡಿರುವ ಕನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿಗಳ ವಿರುದ್ಧ ಲಿಂಗಾಯತ ಮುಖಂಡರು, ಸಂಘಟನೆಗಳು ತೀವ್ರವಾಗಿ ಕಿಡಿಕಾರಿವೆ.
ಲಿಂಗಾಯತ ಮಠಾಧೀಶರು ಮತ್ತು ಬಸವ ಭಕ್ತರ ವಿರುದ್ಧ ಕನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿಗಳು ಪದೇ ಪದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದು, ಇದು ಸಂವಿಧಾನಬಾಹಿರ ಎಂದು ರಾಷ್ಟ್ರೀಯ ಬಸವ ದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ಬಣ್ಣಿಸಿದೆ.
ಅಕ್ಟೋಬರ್ 9 ರಂದು ಸಾಂಗ್ಲಿ ಜಿಲ್ಲೆಯ ಜಾತ್ ತಾಲ್ಲೂಕಿನ ಬಿಲೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಬಸವ ಸಂಸ್ಕೃತಿ ಅಭಿಯಾನದ ನೇತೃತ್ವ ವಹಿಸಿದ್ದ ಲಿಂಗಾಯತ ಮಠಾಧೀಶರ ಒಕ್ಕೂಟದ ಮಠಾಧೀಶರ ವಿರುದ್ಧ ಶ್ರೀಗಳು ಅಸಭ್ಯ ಭಾಷೆ ಬಳಸಿದ್ದಾರೆ. ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅನುಯಾಯಿಗಳನ್ನು ಚಪ್ಪಲಿಯಿಂದ ಹೊಡೆಯಿರಿ ಎಂದು ಹೇಳಿದ್ದಾರೆ.
ಬಸವಕಲ್ಯಾಣದಲ್ಲಿ ನಡೆದ 24 ನೇ ಕಲ್ಯಾಣ ಪರ್ವ ಆಚರಣೆಯ ಸಂದರ್ಭದಲ್ಲಿ ಸ್ವಾಮೀಜಿಗಳು ಈ ರೀತಿಯ ಹೇಳಿಕೆ ನೀಡಿದ್ದು, ಈ ಹೇಳಿಕೆ ಲಿಂಗಾಯತ ಸಮುದಾಯಕ್ಕೆ ನೋವನ್ನುಂಟು ಮಾಡಿದೆ. ಸ್ವಾಮೀಜಿಗಳು ಉಗ್ರ ಸಂಘಟನೆಗಳ ಏಜೆಂಟ್ ನಂತೆ ವರ್ತಿಸುತ್ತಿದ್ದಾರೆ. ಪದೇ ಪದೇ ನಿಂದನೀಯ ನಡವಳಿಕೆಯನ್ನು ಪ್ರದರ್ಶಿಸುವುದು ಅವರ ಸ್ಥಾನಕ್ಕೆ ತಂದಿರುವ ಅಪಮಾನವಾಗಿದೆ. ಅವರು ಸಿದ್ಧೇಶ್ವರ ಸ್ವಾಮೀಜಿಯವರ ಶಿಷ್ಯ ಎಂದು ಕರೆಯಲು ಅನರ್ಹರು. ಕನೇರಿ ಮಠವನ್ನು ಅವಮಾನಿಸಿದ್ದಾರೆ.ಇವರ ವಿರುದ್ಧ ಸರ್ಕಾರ ಗೂಂಡಾ ಕಾಯ್ದೆಯಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಏತನ್ಮದ್ಯೆ ಲಿಂಗಾಯತ ನಾಯಕರಾಗಿರುವ ಮಾಜಿ ಐಎಎಸ್ ಅಧಿಕಾರಿ ಎಸ್.ಎಂ. ಜಾಮ್ದಾರ್, ಸ್ವಾಮೀಜಿಯವರ ಭಾಷೆಯನ್ನು "ಅತ್ಯಂತ ಅಸಭ್ಯ ಮತ್ತು ಸೂಕ್ತವಲ್ಲ ಎಂದು ಹೇಳಿದ್ದಾರೆ.