ನಾನು ಮುಖ್ಯಮಂತ್ರಿ ಆಗಿದ್ದರೆ ರಾಜ್ಯ ಸರ್ಕಾರದ ಐದು ಖಾತರಿಗಳನ್ನು ಜಾರಿಗೆ ತರುತ್ತಿರಲಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಮತ್ತು ಮಾಜಿ ಸಚಿವ ಆರ್‌ವಿ ದೇಶಪಾಂಡೆ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ದೇಶಪಾಂಡೆ ಅವರಿಂದ ಸ್ಪಷ್ಟನೆ ಕೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಅಂಬೇವಾಡಿ ನವಗ್ರಾಮದಲ್ಲಿ ಮಾತನಾಡಿದ ದೇಶಪಾಂಡೆ, ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಂಗ್ಯವಾಡಿದ್ದರು. ಸರ್ಕಾರಿ ಬಸ್‌ಗಳು ಈಗ ಮಹಿಳೆಯರಿಗೆ ಮಾತ್ರ ಸೀಮಿತವಾಗಿದ್ದು, ಪುರುಷರಿಗೆ ಜಾಗವಿಲ್ಲದಂತಾಗಿದೆ ಎಂದಿದ್ದರು. ಮಹಿಳೆಯರಿಗೆ ಪ್ರತಿ ತಿಂಗಳು 2,000 ಕೊಡಲಾಗುತ್ತಿದ್ದು ಅವರಿಗೆ ಲಾಟರಿ ಹೊಡೆದಂತಾಗಿದೆ. ಪುರುಷರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಸಿದ್ದರಾಮಯ್ಯನವರಿಗೆ ಯಾರು ಸಲಹೆ ನೀಡಿದ್ದಾರೋ ದೇವರೇ ಬಲ್ಲ ಎಂದು ಹೇಳಿದರು. ಇನ್ನು ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ದೇಶಪಾಂಡೆ, ನಾನು ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಸರ್ಕಾರಿ ಸ್ಥಳಗಳಲ್ಲಿ RSS ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸದಂತೆ ನಿರ್ಬಂಧ ಹೇರುವಂತೆ ಸಚಿವ ಪ್ರಿಯಾಂಕ್ ಖರ್ಗೆಯವರು ಒತ್ತಾಯಿಸಿದ್ದು, ಇದರ ಬೆನ್ನಲ್ಲೇ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ರಾಜ್ಯದ ಯಾವುದೇ ಸರ್ಕಾರಿ ಸ್ಥಳಗಳಲ್ಲಿ RSS ಸಂಘಟನೆ ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಿನಲ್ಲಿ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳಿಗೆ ನಿರ್ಬಂಧ ಹೇರುವಂತೆ ಪ್ರಿಯಾಂಕ್ ಖರ್ಗೆಯವರು ಅ.4ರಂದು ಪತ್ರ ಬರೆದಿದ್ದರು. ಇದು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ಪ್ರಿಯಾಂಕ್ ಖರ್ಗೆ RSS ಕಾರ್ಯಕ್ರಮಗಳನ್ನ ನಿಷೇಧ ಮಾಡಬೇಕು ಎಂದು ಸಿಎಂಗೆ ಪತ್ರ ಬರೆದಿರೋದು ನನಗೇನು ಗೊತ್ತಿಲ್ಲ. ಆದರೆ ಗೃಹ ಇಲಾಖೆಗೆ ಆ ಪತ್ರ ಬಂದರೆ ಪರಿಶೀಲನೆ ಮಾಡುತ್ತೇವೆ ಎಂಬುದಾಗಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಹಿರಿಯ ರಂಗಭೂಮಿ ಕಲಾವಿದ ಮತ್ತು ಹಾಸ್ಯನಟ, ಧಾರವಾಡ ರಂಗಾಯಣ ನಿರ್ದೇಶಕರಾಗಿದ್ದ ರಾಜು ತಾಳಿಕೋಟೆ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ವಿಜಯಪುರದ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾಗಿದ್ದ ರಾಜು ತಾಳಿಕೋಟೆ ಅವರು, ಉತ್ತರ ಕರ್ನಾಟಕದ ರಂಗಭೂಮಿಯಲ್ಲಿ 'ಖಾಸ್ಗತೇಶ್ವರ' ನಾಟಕ ಮಂಡಳಿಯ ಮಾಲೀಕರಾಗಿ, ಕುಡುಕನ ಪಾತ್ರಗಳ ಮೂಲಕ ಮನೆಮಾತಾಗಿದ್ದರು. ಅವರ ನಿಧನದ ಸುದ್ದಿ ತಿಳಿದು ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎನ್ನುವ ಆರೋಪದ ಮೇಲೆ ಎಸ್ಐಟಿಯಿಂದ ತನಿಖೆ ನಡೆಸಬೇಕು ಎಂದು ಮಾಡಲಾಗಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳು ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಮನವಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜಯಮಾಲ್ಯ ಬಾಗಚಿ ಅವರಿದ್ದ ದ್ವಿಸದಸ್ಯಪೀಠ, ಎಸ್ಐಟಿಗೆ ತನಿಖೆ ವಹಿಸಲು ನಿರಾಕರಿಸಿದೆ. ಈ ವಿಷಯವನ್ನು ಭಾರತೀಯ ಚುನಾವಣಾ ಆಯೋಗದಲ್ಲಿ ಬಗೆಹರಿಸಿಕೊಳ್ಳಬೇಕೆಂದು ಅರ್ಜಿದಾರರಿಗೆ ಕೋರ್ಟ್ ಸೂಚಿಸಿದೆ. ಚುನಾವಣಾ ಅಕ್ರಮ ಆರೋಪ ಸಂಬಂಧ ಈ ಬಗ್ಗೆ ವಿಶೇಷ ತನಿಖೆ ನಡೆಸಲು ನಿರ್ದೇಶನ ನೀಡಬೇಕು ಎಂದು ಕೋರಿ ರೋಹಿತ್ ಪಾಂಡೆ ಎಂಬುವವರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಆರ್‌ಎಸ್‌ಎಸ್ ನಿಷೇಧದ ಕುರಿತು ಮುಖ್ಯಮಂತ್ರಿಗೆ ಬರೆದ ಪತ್ರಕ್ಕಾಗಿ ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ರೈತರಿಗೆ ತೊಂದರೆಯಾಗಿರುವ ತಮ್ಮ ಕ್ಷೇತ್ರದಲ್ಲಿನ ಪ್ರವಾಹದ ಬಗ್ಗೆ ಗಮನಹರಿಸುವ ಬದಲು ಖರ್ಗೆ ಆರ್‌ಎಸ್‌ಎಸ್ ನಿಷೇಧಕ್ಕೆ ಒತ್ತು ನೀಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು. ಈಮಧ್ಯೆ, RSS ವಿಶ್ವದ ಅತ್ಯಂತ ರಹಸ್ಯ ಸಂಘಟನೆ. ಅದು ನೋಂದಾಯಿಸಿಕೊಂಡಿಲ್ಲ. ಆದರೂ ಇನ್ನೂ ನೂರಾರು ಕೋಟಿ ರೂಪಾಯಿ ಮೌಲ್ಯದ ಹಣವನ್ನು ಪಡೆಯುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸೋಮವಾರ ಆರೋಪಿಸಿದ್ದಾರೆ. "ಆರ್ ಎಸ್ಎಸ್ ವಿಶ್ವದ ಅತ್ಯಂತ ರಹಸ್ಯ ಸಂಘಟನೆ. ಇಷ್ಟೊಂದು ಗೌಪ್ಯತೆ ಏಕೆ? ಈ ಜನರು ಯಾರು? ಆರ್‌ಎಸ್‌ಎಸ್ ಮುಖ್ಯಸ್ಥರ ಭಾಷಣದ ನೇರ ಪ್ರಸಾರ ಏಕೆ? ಈ ದೇಶಕ್ಕೆ ಅವರ ಕೊಡುಗೆ ಏನು? ಅವರು ತಮ್ಮ 100 ವರ್ಷಗಳ ಅಸ್ತಿತ್ವದಲ್ಲಿ ತಮ್ಮ ಹತ್ತು ಕೊಡುಗೆಗಳನ್ನು ನನಗೆ ತಿಳಿಸಲಿ. ಬಿಜೆಪಿ ಆರ್‌ಎಸ್‌ಎಸ್‌ನ 'ಕೈಗೊಂಬೆ' ಎಂದು ಖರ್ಗೆ ಆರೋಪಿಸಿದರು.