ಬೆಂಗಳೂರು: ಆಟವಾಡಲು ಸ್ನೇಹತರೊಂದಿಗೆ ಕೆರೆಗೆ ಇಳಿದಿದ್ದ ಬಾಲಕನೋರ್ವ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೊರವಲಯದಲ್ಲಿರುವ ಕಿತ್ತನಹಳ್ಳಿ ಕೆರೆಯಲ್ಲಿ ಭಾನುವಾರ ನಡೆದಿದೆ.
ಮೃತನನ್ನು ಕಾಮಾಕ್ಷಿಪಾಳ್ಯದ ಕಾವೇರಿಪುರ ನಿವಾಸಿ ಮತ್ತು ರಾಜಾಜಿನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಪೂರ್ವ ಕಾಲೇಜಿನ (ಪಿಯು) ವಿದ್ಯಾರ್ಥಿ ಪೃಥ್ವಿಕ್ (17) ಎಂದು ಗುರ್ತಿಸಲಾಗಿದೆ.
ಬಾಲಕ ಪೃಥ್ವಿಕ್ ತನ್ನ ಐವರು ಸ್ನೇಹಿತರೊಂದಿಗೆ ಕಿತ್ತನಹಳ್ಳಿ ಕೆರೆಗೆ ಸಂಜೆ 7 ಗಂಟೆ ಸುಮಾರಿಗೆ ಹೋಗಿದ್ದಾನೆ. ಸ್ನೇಹಿತರು ಕೆರೆ ಇಳಿದಿದ್ದರೂ, ಈಜು ಬಾರದ ಕಾರಣ ಪೃಥ್ವಿಕ್ ನೀರಿಗೆ ಇಳಿದಿರಲಿಲ್ಲ. ನಂತರ ಸ್ನೇಹಿತರು ನೀರಿಗೆ ಇಳಿಯುವಂತೆ ಮನವೊಲಿಸಿದ್ದಾರೆ. ಈ ವೇಳೆ ಪೃಥ್ವಿಕ್ ನೀರಿಗೆ ಇಳಿದಿದ್ದು, ಕೂಡಲೇ ಮುಳುಗಿದ್ದಾನೆ. ಇದನ್ನು ನೋಡಿದ ಆತನ ಸ್ನೇಹಿತರು ಭಯಭೀತರಾಗಿ ಸ್ಥಳದಿಂದ ಓಡಿಹೋಗಿ, ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ರಾತ್ರಿ 8 ಗಂಟೆ ಸುಮಾರಿಗೆ ಮಾಹಿತಿ ತಿಳಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಬಂದು ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಸಾವಿನ ಕುರಿತು ಪೃಥ್ವಿಕ್ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್) ಸೆಕ್ಷನ್ 194 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೃಥ್ವಿಕ್ ಸ್ನೇಹಿತರನ್ನು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.