ಬೆಂಗಳೂರು: ತಂಬಾಕು ಉತ್ಪನ್ನ ಪರೀಕ್ಷೆ ಮತ್ತು ಸಾರ್ವಜನಿಕ ಆರೋಗ್ಯ ಸಂಶೋಧನೆಯಲ್ಲಿ ಮಹತ್ವದ ಹೆಜ್ಜೆಯಾಗಿ 4ನೇ ರಾಷ್ಟ್ರೀಯ ತಂಬಾಕು ಪರೀಕ್ಷಾ ಪ್ರಯೋಗಾಲಯ (ಎನ್‌ಟಿಟಿಎಲ್) ಅನ್ನು ಮಂಗಳವಾರ ಇಲ್ಲಿನ ನಿಮ್ಹಾನ್ಸ್‌ನಲ್ಲಿ ಉದ್ಘಾಟಿಸಲಾಯಿತು ಎಂದು ಸಂಸ್ಥೆ ತಿಳಿಸಿದೆ.
ಭಾರತದಲ್ಲಿ ಸದ್ಯ ಮೂರು ರಾಷ್ಟ್ರೀಯ ತಂಬಾಕು ಪರೀಕ್ಷಾ ಪ್ರಯೋಗಾಲಯಗಳು ಇದ್ದು, ನೋಯ್ಡಾದ ರಾಷ್ಟ್ರೀಯ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (NICPR) ಒಂದು ಅತ್ಯುನ್ನತ ಪ್ರಯೋಗಾಲಯ, ಮುಂಬೈನ ಕೇಂದ್ರ ಔಷಧ ಪರೀಕ್ಷಾ ಪ್ರಯೋಗಾಲಯ (CDTL) ಮತ್ತು ಗುವಾಹಟಿಯಲ್ಲಿರುವ ಪ್ರಾದೇಶಿಕ ಔಷಧ ಪರೀಕ್ಷಾ ಪ್ರಯೋಗಾಲಯ (RDTL) ಸೇರಿದಂತೆ ಎರಡು ಪ್ರಾದೇಶಿಕ ಪ್ರಯೋಗಾಲಯಗಳಿವೆ.
ನಿಮ್ಹಾನ್ಸ್‌ನಲ್ಲಿ ಉದ್ಘಾಟನೆಗೊಂಡಿರುವ ಹೊಸ ಪ್ರಯೋಗಾಲಯವು, ತಂಬಾಕು ಉತ್ಪನ್ನಗಳಲ್ಲಿನ ರಾಸಾಯನಿಕ ಅಂಶ ಮತ್ತು ವಿಷಕಾರಿ ವಸ್ತುಗಳನ್ನು ಪರೀಕ್ಷೆ ಮತ್ತು ವಿಶ್ಲೇಷಣೆ ನಡೆಸಲಿದೆ. ಅಲ್ಲದೆ ಇದು ಪರೀಕ್ಷೆಗೆ ಭಾರತೀಯ ಮತ್ತು ಅಂತರರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸಲಿದ್ದು, ತಂಬಾಕು ನಿಯಂತ್ರಣ ಕಾನೂನುಗಳು ಮತ್ತು ನಿಯಮಗಳನ್ನು ಜಾರಿಗೊಳಿಸುವುದು ಮತ್ತು ತಂಬಾಕು ಉತ್ಪನ್ನಗಳನ್ನು ಮೌಲ್ಯಮಾಪನ ಮಾಡಲು ವೈಜ್ಞಾನಿಕ ಡೇಟಾವನ್ನು ಒದಗಿಸುತ್ತದೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
'ತಂಬಾಕು ನಿಯಂತ್ರಣ ಕ್ರಮಗಳನ್ನು ಬಲಪಡಿಸಲು ಮತ್ತು ತಂಬಾಕಿನಲ್ಲಿರುವ ಹಾನಿಕಾರಕ ಪದಾರ್ಥಗಳನ್ನು ಮೇಲ್ವಿಚಾರಣೆ ಮಾಡಲು ಸಂಶೋಧನಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಸಲುವಾಗಿ ಈ ಪ್ರಯೋಗಾಲಯ ಸ್ಥಾಪನೆಯಾಗಿದೆ' ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಹೇಳಿದೆ.
ಸಂಸ್ಥೆಯ ಪ್ರಕಾರ, ನಿಮ್ಹಾನ್ಸ್‌ನಲ್ಲಿ ಈ ಸೌಲಭ್ಯದ ಸ್ಥಾಪನೆಯು ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ಶ್ರೇಷ್ಠತೆಯ ಮೂಲಕ ಆರೋಗ್ಯ ಸಂಶೋಧನೆ ಮತ್ತು ಸಾರ್ವಜನಿಕ ಆರೋಗ್ಯ ನೀತಿಯನ್ನು ಮುನ್ನಡೆಸುವ ತನ್ನ ಬದ್ಧತೆಯನ್ನು ಬಲಪಡಿಸುತ್ತದೆ.
'ಈ ಉಪಕ್ರಮವು ಪುರಾವೆ ಆಧಾರಿತ ತಂಬಾಕು ನಿಯಂತ್ರಣಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಮತ್ತು ಭಾರತದಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯದ ಹೊರೆಯನ್ನು ಕಡಿಮೆ ಮಾಡುವ ಸರ್ಕಾರದ ಪ್ರಯತ್ನಗಳನ್ನು ಬೆಂಬಲಿಸುತ್ತದೆ' ಎಂದು ಅದು ಹೇಳಿದೆ.