ಬೆಂಗಳೂರು: ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಬೆಂಗಳೂರಿನ ರಸ್ತೆಗಳು ಮತ್ತು ಕಸದ ಸಮಸ್ಯೆ ಬಗ್ಗೆ ವಿದೇಶಿ ಉದ್ಯಮಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ನಗರದಲ್ಲಿನ ರಸ್ತೆಗಳ ಕಳಪೆ ಸ್ಥಿತಿ ಮತ್ತು ಸಂಚಾರ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಮತ್ತೆ ತೀವ್ರ ಟೀಕೆಗೆ ಗುರಿಯಾಗಿದೆ.
"ಬೆಂಗಳೂರು ಲಕ್ಷಾಂತರ ಜನರಿಗೆ ಅವಕಾಶ, ಗುರುತು ಮತ್ತು ಯಶಸ್ಸನ್ನು ನೀಡಿದೆ. ಈ ನಗರಕ್ಕೆ ನಿರಂತರ ಟೀಕೆಗಳ ಬದಲಾಗಿ ಸಾಮೂಹಿಕ ಪ್ರಯತ್ನದ ಅಗತ್ಯ ಇದೆ" ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕಿರಣ್ ಮಜುಂದಾರ್ ಶಾ ಅವರಿಗೆ ಎಕ್ಸ್ ಮೂಲಕವೇ ತಿರುಗೇಟು ನೀಡಿದ್ದಾರೆ.
ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಎಂ ಬಿ ಪಾಟೀಲ್ ಕೂಡ ಸಮಸ್ಯೆಗಳನ್ನು ಒಪ್ಪಿಕೊಂಡಿದ್ದು, ಅವುಗಳನ್ನು ಸರಿಪಡಿಸಲು ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ ಮತ್ತು ನಗರವನ್ನು ಸುಧಾರಿಸಲು "ಸಾಮೂಹಿಕ ಪ್ರಯತ್ನ" ಕ್ಕೆ ಕರೆ ನೀಡಿದ್ದಾರೆ.
"ಹೌದು, ಸಮಸ್ಯೆಗಳಿವೆ, ಆದರೆ ನಾವು ಅವುಗಳನ್ನು ಗಮನ ಮತ್ತು ತುರ್ತಿನಿಂದ ಪರಿಹರಿಸುತ್ತಿದ್ದೇವೆ. ರಸ್ತೆ ದುರಸ್ತಿಗಾಗಿ 1,100 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ, 10,000ಕ್ಕೂ ಹೆಚ್ಚು ಗುಂಡಿಗಳನ್ನು ಗುರುತಿಸಲಾಗಿದೆ ಮತ್ತು 5,000 ಕ್ಕೂ ಹೆಚ್ಚು ಗುಂಡಿಗಳನ್ನು ಈಗಾಗಲೇ ಆದ್ಯತೆಯ ಮೇಲೆ ಮುಚ್ಚಲಾಗಿದೆ. ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಲು ಪ್ರಮುಖ ಮೂಲಸೌಕರ್ಯ ಕಾಮಗಾರಿಗಳು ನಡೆಯುತ್ತಿವೆ" ಎಂದು ಬೆಂಗಳೂರು ಉಸ್ತುವಾರಿ ಸಚಿವರು ಆಗಿರುವ ಡಿಕೆ ಶಿವಕುಮಾರ್ ಅವರು 'X' ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ, ಪೂರ್ವ ಕಾರ್ಪೊರೇಷನ್ ತನ್ನದೇ ಆದ 1,673 ಕೋಟಿ ರೂ. ಆದಾಯವನ್ನು 50 ವಾರ್ಡ್‌ಗಳಲ್ಲಿ ಮೂಲಸೌಕರ್ಯವನ್ನು ನೇರವಾಗಿ ಸುಧಾರಿಸಲು ಇಟ್ಟುಕೊಳ್ಳುತ್ತದೆ. ಇದು ನಮ್ಮ ಐಟಿ ಕಾರಿಡಾರ್‌ಗಳಿಗೆ ನೇರವಾಗಿ ಪ್ರಯೋಜನ ನೀಡುತ್ತದೆ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ.
ಸಿಎಸ್‌ಬಿ-ಕೆ ಆರ್ ಪುರಂ ಪುನರಾಭಿವೃದ್ಧಿ, ಎತ್ತರಿಸಿದ ಕಾರಿಡಾರ್‌ಗಳಂತಹ ಪ್ರಮುಖ ಕಾಮಗಾರಿಗಳ ಮೂಲಕ, ನಾವು ನಾಗರಿಕರು, ಉದ್ಯೋಗಿಗಳು ಮತ್ತು ಕಂಪನಿಗಳಿಗಾಗಿ ಮೂಲಸೌಕರ್ಯವನ್ನು ಬಲಪಡಿಸುತ್ತಿದ್ದೇವೆ ಎಂದು ಡಿಸಿಎಂ ತಿಳಿಸಿದ್ದಾರೆ.