ಬೆಂಗಳೂರು: ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧದ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆದೇಶಿಸಿದ್ದ ಇಲಾಖಾ ತನಿಖೆಯನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (CAT) ಸೋಮವಾರ ರದ್ದುಗೊಳಿಸಿದೆ.
ಕರ್ನಾಟಕದ ಐಪಿಎಸ್ ಹಿರಿಯ ಅಧಿಕಾರಿ, ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (CAT - Central Administrative Tribunal) ಬಿಗ್ ರಿಲೀಫ್ ನೀಡಿದ್ದು, ಅಲೋಕ್ ಕುಮಾರ್ ವಿರುದ್ಧದ ಫೋನ್ ಟ್ಯಾಪಿಂಗ್ ಪ್ರಕರಣದ ಇಲಾಖಾ ತನಿಖೆ ರದ್ದು ಮಾಡಿದೆ.
ಮಾತ್ರವಲ್ಲದೇ ಅಲ್ಲದೇ ತಡೆಹಿಡಿಯಲಾಗಿದ್ದ ಅವರ ಬಡ್ತಿ ಮತ್ತು ಇತರ ಸೌಲಭ್ಯಗಳನ್ನು ನೀಡುವಂತೆ ಆದೇಶಿಸಿದೆ.
ಹೀಗಾಗಿ ಈ ಪ್ರಕರಣದ ಕಾನೂನು ಹೋರಾಟದಲ್ಲಿ ಅಲೋಕ್ ಕುಮಾರ್ ಗೆದ್ದು ಬೀಗಿದ್ದು, ರಾಜ್ಯ ಸರ್ಕಾರಕ್ಕೆ ಮುಖಭಂಗವಾದಂತಾಗಿದೆ.
ಸರ್ಕಾರದ ಇಲಾಖಾವಾರು ತನಿಖೆಗೆ ಆದೇಶ ನೀಡಿದ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಅಲೋಕ್ ಕುಮಾರ್ ಸಿಎಟಿ ಮೊರೆ ಹೋಗಿದ್ದರು.
ಬಳಿಕ ವಿಚಾರಣೆ ನಡೆದು ಇಬ್ಬರು ನ್ಯಾಯಮೂರ್ತಿಗಳ ನಡುವೆ ವಿಭಿನ್ನ ತೀರ್ಪು ಹಿನ್ನೆಲೆಯಲ್ಲಿ ಸಿಎಟಿ ಮುಖ್ಯಸ್ಥ ನ್ಯಾಯಮೂರ್ತಿ ರಣ್‌ಜೀತ್ ಬಳಿ ಹೋಗಿದ್ದು, ಎರಡೂ ಕಡೆಯ ವಾದ ಪ್ರತಿವಾದ ಆಲಿಸಿ ಇಂದು (ಅಕ್ಟೋಬರ್ 14) ಈ ಮಹತ್ವದ ತೀರ್ಪು ನೀಡಿದ್ದಾರೆ.
ಏನಿದು ಪ್ರಕರಣ?
2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತದಲ್ಲಿದ್ದಾಗ ಫೋನ್ ಟ್ಯಾಪಿಂಗ್ ಹಗರಣವು ಭಾರೀ ಸದ್ದು ಮಾಡಿತ್ತು. ಈ ಪ್ರಕರಣದಲ್ಲಿ ಅಂದಿನ ಗೃಹ ಇಲಾಖೆಯ ಕೆಲವು ಅಧಿಕಾರಿಗಳ ಪಾತ್ರದ ಕುರಿತು ತನಿಖೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲೋಕ್ ಕುಮಾರ್ ಸೇರಿದಂತೆ ಕೆಲವು ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಅಲೋಕ್ ಕುಮಾರ್ ಅವರು ಸಿಎಟಿ ಮೊರೆ ಹೋಗಿದ್ದರು.