ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ 10 ದಿನಗಳಲ್ಲಿ 13.16 ಲಕ್ಷ ಮನೆಗಳಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 4 ರಿಂದ 13 ರವರೆಗೆ, 13,12,183 ಮನೆಗಳ ಸಮೀಕ್ಷೆ ಮಾಡಲಾಗಿದೆ. ಇನ್ನೂ 19 ಲಕ್ಷ ಮನೆಗಳ ಸಮೀಕ್ಷೆ ಬಾಕಿಯಿದ್ದು, ಮುಂದಿನ 5 ದಿನಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಸೋಮವಾರ, ಐದು ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 1,19,303 ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ. ಆರಂಭದಲ್ಲಿ ದಿನಕ್ಕೆ 2 ಲಕ್ಷ ಮನೆಗಳ ಸಮೀಕ್ಷೆಯ ಗುರಿಯನ್ನು ನಿಗದಿಪಡಿಸಲಾಗಿತ್ತು. ನಂತರ ಅದನ್ನು 3 ಲಕ್ಷಕ್ಕೆ ಹೆಚ್ಚಿಲಾಯಿತು. ವಿವಿಧ ಸರ್ಕಾರಿ ಇಲಾಖೆಗಳಿಂದ ನಿಯೋಜಿಸಲಾದವರು ಸೇರಿದಂತೆ 18,000 ಸಿಬ್ಬಂದಿ ಲಭ್ಯವಿರುವುದರಿಂದ, ಗಣತಿದಾರರು ದೈನಂದಿನ ಗುರಿಯನ್ನು ಸಾಧಿಸಲು ಶ್ರಮಿಸುತ್ತಿದ್ದಾರೆಂದು ತಿಳಿಸಿದ್ದಾರೆ.
ಇಲ್ಲಿಯವರೆಗೆ, ಬೆಂಗಳೂರು ಕೇಂದ್ರದಲ್ಲಿ ಗಣತಿದಾರರು 1,71,075 ಮನೆಗಳನ್ನು ಸಮೀಕ್ಷೆ ನಡೆಸಿದ್ದರೆ, ಪೂರ್ವದಲ್ಲಿ 1,96,299, ಉತ್ತರದಲ್ಲಿ 3,20,931, ದಕ್ಷಿಣದಲ್ಲಿ 2,34,893 ಮತ್ತು ಪಶ್ಚಿಮದಲ್ಲಿ 3,92,985 ಮನೆಗಳನ್ನು ಸಮೀಕ್ಷೆಗೆ ನಡೆಸಲಾಗಿದೆ. ಎಲ್ಲಾ ನಾಗರಿಕರು ಸಮೀಕ್ಷೆಗೆ ಸಹಕರಿಸಲು ಮತ್ತು ಭಾಗವಹಿಸಲು ಮನವಿ ಮಾಡಲಾಗಿದೆ.
ತಾಂತ್ರಿಕ ದೋಷಗಳು, ಆರೋಗ್ಯ ಕಾಳಜಿಗಳು ಮತ್ತು ಕೆಲಸ ಕಳೆದುಕೊಳ್ಳುವ ಬೆದರಿಕೆ ಅಥವಾ ಮೇಲ್ವಿಚಾರಕರ ಒತ್ತಡದ ನಡುವೆಯೂ ಗಣತಿದಾರರು 13.16 ಲಕ್ಷ ಮನೆಗಳ ಸಮೀಕ್ಷೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬರುವ ದಿನಗಳಲ್ಲಿ ಉಳಿದ ಮನೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.