ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಲು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ನಿರಾಕರಿಸಿದ್ದಾರೆ.
ನಾವು ಹಿಂದುಳಿದ ವರ್ಗದ ಯಾವ ಜಾತಿಗೂ ಸೇರುವವರಲ್ಲ. ಆದ್ದರಿಂದ ಈ ಸಮೀಕ್ಷೆಯಿಂದ ಸರ್ಕಾರಕ್ಕೆ ಏನೂ ಉಪಯೋಗವಿಲ್ಲ. ಆದ್ದರಿಂದ ನಾವು ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ವಯಂ ದೃಢೀಕರಣ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಅಕ್ಟೋಬರ್ 10 ರಂದು ಸುಧಾಮೂರ್ತಿ ದಂಪತಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸ್ವಯಂ ದೃಢೀಕರಣ ಪತ್ರ ಬರೆದಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಯುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನನ್ನ ಕೆಲವು ವೈಯಕ್ತಿಕ ಕಾರಣಗಳಿಂದ ಮಾಹಿತಿ ನೀಡಲು ನಿರಾಕರಿಸುತ್ತೇವೆ. ನಾನು ಮತ್ತು ನನ್ನ ಕುಟುಂಬ ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಮತ್ತು ನಮ್ಮ ಮಾಹಿತಿಯನ್ನು ನೀಡಲು ನಿರಾಕರಿಸಿದ್ದೇನೆ ಎಂದು ಈ ಮೂಲಕ ದೃಢೀಕರಿಸುತ್ತೇವೆ ಎಂದು ದಂಪತಿ ತಿಳಿಸಿದ್ದಾರೆ.
ಬೆಂಗಳೂರಿನ ಜಯನಗರದಲ್ಲಿ ಸುಧಾ ಮೂರ್ತಿ ಅವರ ನಿವಾಸವಿದ್ದು, ಇಬ್ಬರೂ ಕರ್ನಾಟಕದ ನಿವಾಸಿಗಳಾಗಿದ್ದಾರೆ. ಕರ್ನಾಟಕ ಹೈಕೋರ್ಟ್ ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಮತ್ತು ಗಣತಿದಾರರು ಸಾರ್ವಜನಿಕರಿಂದ ಉತ್ತರಗಳನ್ನು ಒತ್ತಾಯಿಸುವಂತಿಲ್ಲ ಎಂದು ತೀರ್ಪು ನೀಡಿರುವುದರಿಂದ ದಂಪತಿಗಳು ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ.
ಜಯನಗರ 4 ನೇ ಟಿ ಬ್ಲಾಕ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸಮೀಕ್ಷೆಗೆ ಹೋದ ಗಣತಿದಾರರಿಗೆ ಅವರು ಯಾವುದೇ ಹಿಂದುಳಿದ ಜಾತಿಗೆ ಸೇರಿದವರಲ್ಲ ಮತ್ತು ಸಮೀಕ್ಷೆಯಲ್ಲಿ ಭಾಗವಹಿಸಲು ಬಯಸುವುದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ. ಏತನ್ಮಧ್ಯೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಗರದಲ್ಲಿ ಇಲ್ಲಿಯವರೆಗೆ 15.42 ಲಕ್ಷ ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ ಎಂದು ಹೇಳಿದೆ.