ಬೆಂಗಳೂರು: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಮಾಜಿ ರಾಜ್ಯ ಸಚಿವ ಭಗವಂತ್ ಖೂಬಾ ಅವರು ಕಲಬುರಗಿ ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಕೇಳಿಬಂದಿದೆ.
ಬಿಜೆಪಿಯ ಮಾಜಿ ಸಂಸದ ಭಗವಂತ್ ಖೂಬಾ ಅವರ ವಿರುದ್ಧ ಜಿಲ್ಲಾಡಳಿತವು ಒಟ್ಟು 25.29 ಕೋಟಿ ರೂಪಾಯಿ ದಂಡವನ್ನು ವಸೂಲಿ ಮಾಡಲು ಕ್ರಮಗಳನ್ನು ಪ್ರಾರಂಭಿಸಿದೆ. ಇದನ್ನು ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ಭೂ ಕಂದಾಯದ ಬಾಕಿ ಎಂದು ಪರಿಗಣಿಸಿದೆ. ಹಲವು ಬಾರಿ ನೊಟೀಸ್ ನೀಡಿದ್ದರೂ ದಂಡ ಪಾವತಿಸಲು ಹಿಂಜರಿಯುತ್ತಿದ್ದು, ಕಾನೂನು ಪ್ರಕಾರ ಅವರ ವಿರುದ್ಧ ಖಾಸಗಿ ದೂರು ದಾಖಲಿಸಲಾಗಿದೆ.
ವಸೂಲಾತಿ ಪ್ರಕ್ರಿಯೆಗಳಲ್ಲಿ ಸುಸ್ತಿದಾರ ಭಗವಂತ್ ಖೂಬಾ ಅವರ ಚರ ಮತ್ತು ಸ್ಥಿರ ಆಸ್ತಿಗಳನ್ನು ವಶಪಡಿಸಿಕೊಳ್ಳುವುದು ಸೇರಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಚಾ ಗ್ರಾಮದಲ್ಲಿ ಎಂಟು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಭಗವಂತ್ ಖೂಬಾ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸಂಜೀವಕುಮಾರ ಸಲ್ಲಿಸಿದ ದೂರಿನ ಮೇರೆಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರು ವಸೂಲಾತಿ ಪ್ರಕ್ರಿಯೆ ಆರಂಭಿಸಿದ್ದಾರೆ.