ಬೆಂಗಳೂರು: ಇನ್ಫೊಸಿಸ್‌ನ ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿ ಅವರು ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡುವುದಿಲ್ಲ ಎಂದು ನಿರಾಕರಿಸಿ ಸ್ವಯಂ ದೃಢೀಕರಿಸಿದ್ದ ಪತ್ರವು ಸೋರಿಕೆಯಾಗಿದ್ದು ಹೇಗೆ ಎಂದು ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಮೀಕ್ಷೆಗೆ ವಿರೋಧ ವ್ಯಕ್ತವಾದಾಗ ಮತ್ತು ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸುವಾಗ ರಾಜ್ಯ ಸರ್ಕಾರವು ರಾಜ್ಯದಲ್ಲಿ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದಿಂದ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ ನಡೆಯುತ್ತಿದ್ದು, ಸಾರ್ವಜನಿಕರು ನೀಡುವ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು.
ಹೈಕೋರ್ಟ್ ಮುಂದೆ ಈ ವಿಚಾರ ಬಂದಾಗಲೂ ಎಲ್ಲರ ಖಾಸಗಿ ಸ್ವಾತಂತ್ರ್ಯವನ್ನು ರಕ್ಷಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಈ ವಿಚಾರದಲ್ಲಿ ರಾಜ್ಯ ಸರ್ಕಾರ ವಂಚಿಸಿದೆ. ನ್ಯಾಯಾಂಗಕ್ಕೆ ಕೊಟ್ಟಿರುವ ಭರವಸೆಯನ್ನು ಉಲ್ಲಂಘಿಸಿದೆ ಎಂದು ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅರೋಪಿಸಿದ್ದಾರೆ.
ಇದು ರಾಜ್ಯದ ಜನರಿಗೆ, ನ್ಯಾಯಾಲಯಕ್ಕೆ ಬಗೆದ ದ್ರೋಹ. ನಾರಾಯಣಮೂರ್ತಿ ಅವರ ಕುಟುಂಬದ ಖಾಸಗಿತನಕ್ಕೆ ಸರ್ಕಾರ ಧಕ್ಕೆ ತಂದಿದೆ. ಆ ಪತ್ರ ಬಹಿರಂಗವಾಗಿರುವ ಬಗ್ಗೆ ರಾಜ್ಯಕ್ಕೆ ಸ್ಪಷ್ಟೀಕರಣ ನೀಡಬೇಕೆಂದು ಆಗ್ರಹಿಸುತ್ತೇನೆ. ಇದು ಸರ್ಕಾರದ ಅಸಮರ್ಥತೆಯನ್ನು ಅಥವಾ ರಾಜ್ಯಕ್ಕೆ ಸರ್ಕಾರ ಸುಳ್ಳು ಹೇಳಿದೆ ಎಂಬುದನ್ನು ಸಾಬೀತುಗೊಳಿಸಿರುವ ವಿದ್ಯಮಾನ ಎಂದು ಸುರೇಶ್ ಕುಮಾರ್ ಆರೋಪಿಸಿದ್ದಾರೆ.