ʻಮಹಾಕ್ಷತ್ರಿಯʼ ನೃತ್ಯರೂಪಕ 
ರಾಜ್ಯ

ಬೆಂಗಳೂರು: ಅಕ್ಟೋಬರ್ 19ರಂದು‌ ಕಲಾ ಸಂವಾದದಲ್ಲಿ ʻಮಹಾಕ್ಷತ್ರಿಯʼ ನೃತ್ಯರೂಪಕ!

'ಮಹಾಕ್ಷತ್ರಿಯ' ನೃತ್ಯ ನಾಟಕವು ಋಷಿಗಳಾದ ವಿಶ್ವಮಿತ್ರ ಮತ್ತು ವಸಿಷ್ಠರ ಕಾಲಾತೀತ ಕಥೆಯನ್ನು ಆಧರಿಸಿದೆ.

ಬೆಂಗಳೂರು: ಪರಮ್‌ ಫೌಂಡೇಶನ್‌ನ ವಿಶಿಷ್ಟ ಉಪಕ್ರಮವಾದ ' ಕಲಾ ಸಂವಾದ' ಕಾರ್ಯಕ್ರಮದ ಎರಡನೇ ಆವೃತ್ತಿಯಾದ 'ಮಹಾಕ್ಷತ್ರಿಯ' ನೃತ್ಯರೂಪಕದ ವಿಡಿಯೋ ಪ್ರದರ್ಶನ ಅಕ್ಟೋಬರ್ 19ರಂದು ನಡೆಯಲಿದ್ದು, ಕಲಾರಸಿಕರನ್ನು ಪೌರಾಣಿಕ ಜಗತ್ತಿನತ್ತ ಕರೆದೊಯ್ಯಲು ಸಿದ್ಧವಾಗಿದೆ.

ಇಲ್ಲಿ ಕೇವಲ ಪ್ರದರ್ಶನ ಮಾತ್ರವಲ್ಲದೆ, ನೃತ್ಯ ರೂಪಕದ ಸೃಜನಾತ್ಮಕ ಪ್ರಕ್ರಿಯೆಯ ಹಿಂದಿನ ಒಳನೋಟಗಳ ಕುರಿತು ಗಹನವಾದ ಚರ್ಚೆ ನಡೆಯಲಿದೆ.

ಕಲೆ, ಸಂಸ್ಕೃತಿ ಮತ್ತು ಸೃಜನಾತ್ಮಕ ಪ್ರಕ್ರಿಯೆಗಳ ಕುರಿತು ಕಲಾವಿದರು, ವಿದ್ವಾಂಸರು ಮತ್ತು ಪ್ರೇಕ್ಷಕರನ್ನು ಒಟ್ಟುಗೂಡಿಸುವ ಉದ್ದೇಶ ಹೊಂದಿರುವ 'ಕಲಾ ಸಂವಾದ', ಈ ಬಾರಿ ದೇವುಡು ನರಸಿಂಹ ಶಾಸ್ತ್ರಿಯವರ 'ಮಹಾ ಬ್ರಾಹ್ಮಣ' ಕೃತಿಯಿಂದ ಸ್ಫೂರ್ತಿ ಪಡೆದ ಮನಮೋಹಕ ನೃತ್ಯ ನಾಟಕವಾದ 'ಮಹಾಕ್ಷತ್ರಿಯ' ನೃತ್ಯರೂಪಕದ ರೆಕಾರ್ಡೆಡ್ ವಿಡಿಯೋವನ್ನು ಮೊದಲಿಗೆ ಪ್ರದರ್ಶಿಸಲಿದೆ.

ಮಹಾಕ್ಷತ್ರಿಯ: ದೃಶ್ಯ ಪ್ರದರ್ಶನ ಮತ್ತು ಆಳವಾದ ಸಂವಾದ

'ಮಹಾಕ್ಷತ್ರಿಯ' ನೃತ್ಯ ನಾಟಕವು ಋಷಿಗಳಾದ ವಿಶ್ವಮಿತ್ರ ಮತ್ತು ವಸಿಷ್ಠರ ಕಾಲಾತೀತ ಕಥೆಯನ್ನು ಆಧರಿಸಿದೆ. ರೆಕಾರ್ಡೆಡ್ ವಿಡಿಯೋ ಪ್ರದರ್ಶನದ ನಂತರ, ಪ್ರೇಕ್ಷಕರು ಹಾಗೂ ಯುವ ಕಲಾವಿದರೊಂದಿಗೆ ಸಂವಾದಾತ್ಮಕ ಚರ್ಚೆ(Interactive Discussion) ನಡೆಯಲಿದೆ. ಈ ಚರ್ಚೆಯು ಕಥೆಯ ಒಳಾರ್ಥಗಳು, ಪಾತ್ರಗಳ ಮನಃಸ್ಥಿತಿಗಳನ್ನು ಮೀರಿದ ಆಳವಾದ ವಿಷಯಗಳತ್ತ ಗಮನಹರಿಸಲಿದೆ.

ಸಂವಾದದ ಪ್ರಮುಖ ಅಂಶಗಳು

1. ತಂತ್ರಜ್ಞಾನ ಮತ್ತು ನಿರ್ಮಾಣದ ಸವಾಲುಗಳು

ನಾಟಕದ ರೆಕಾರ್ಡಿಂಗ್‌ ಮತ್ತು ವಿಡಿಯೋ ನಿರ್ಮಾಣದ ಹಂತದಲ್ಲಿ ಎದುರಾದ ಬೆಳಕು, ಧ್ವನಿ, ಸೆಟ್ ವಿನ್ಯಾಸ, ಸಿನಿಮಾಟೋಗ್ರಫಿ ಮುಂತಾದ ತಾಂತ್ರಿಕ ಸವಾಲುಗಳನ್ನು ಮತ್ತು ಅವುಗಳನ್ನು ಎದುರಿಸಿದ ಬಗೆಯನ್ನು ವಿಶ್ಲೇಷಿಸಲಾಗುತ್ತದೆ.

2. ಪರದೆ ಹಿಂದಿನ ಸವಾಲುಗಳು

ನಾಟಕವನ್ನು ದೃಶ್ಯರೂಪಕ್ಕೆ ತರುವಲ್ಲಿ ಕಲಾವಿದರು ಮತ್ತು ತಂತ್ರಜ್ಞರು ಅನುಭವಿಸಿದ ಸಮಯದ ನಿರ್ವಹಣೆ, ಸಮನ್ವಯತೆ, ಸಂಪನ್ಮೂಲಗಳ ಬಳಕೆ ಹಾಗೂ ಕೋರಿಯೋಗ್ರಫಿಯನ್ನು ಸೆರೆಹಿಡಿಯುವ ವಿಶಿಷ್ಟ ಸವಾಲುಗಳ ಬಗ್ಗೆ ಚರ್ಚಿಸಲಾಗುತ್ತದೆ.

3. ಕಥೆ ಮತ್ತು ಪಾತ್ರಗಳ ಒಳಾರ್ಥಗಳು

ಮೂಲ ಕೃತಿಯಿಂದ ಪ್ರೇರಣೆ ಪಡೆದು, ಅದನ್ನು ನೃತ್ಯ ನಾಟಕ ರೂಪಕ್ಕೆ ಬದಲಾಯಿಸುವ ಪ್ರಕ್ರಿಯೆ, ಪಾತ್ರಗಳ ಮನೋವ್ಯಾಪಾರ ಮತ್ತು ಕಥೆಯ ಸಾಮಾಜಿಕ ಅಥವಾ ಆಧ್ಯಾತ್ಮಿಕ ಸಂದೇಶಗಳ ಬಗ್ಗೆ ಆಳವಾದ ಒಳನೋಟಗಳನ್ನು ನೀಡಲಾಗುತ್ತದೆ.

ಈ ಚರ್ಚೆಗೆ ಖ್ಯಾತ ಕಲಾವಿದ ಮತ್ತು ನಿರ್ದೇಶಕರಾದ ಪ್ರಕಾಶ್ ಬೆಳವಾಡಿ ಅವರು ಸಂವಾದಕರಾಗಿ (Moderator) ಭಾಗವಹಿಸಲಿದ್ದಾರೆ. ಕಲಾವಿದರಾದ ಜನಾರ್ದನ ರಾಜ್ ಅರಸ್, ಅರ್ಜುನ್ ಭಾರದ್ವಾಜ್ ಮತ್ತು ಪರಮ್‌ ಕಲ್ಚರ್‌ನ ನಿರ್ದೇಶಕರಾಗಿರುವ ಸಂಗೀತ ಮಾಂತ್ರಿಕ ಪ್ರವೀಣ್ ಡಿ. ರಾವ್ ಜೊತೆಯಾಗಲಿದ್ದಾರೆ.

ಯಾವಾಗ ಮತ್ತು ಎಲ್ಲಿ?

ಕಲಾ ಸಂವಾದದ ಎರಡನೇ ಆವೃತ್ತಿಯ ಈ 'ಮಹಾಕ್ಷತ್ರಿಯ' ಕಾರ್ಯಕ್ರಮವು ಅಕ್ಟೋಬರ್ 19ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಬನಶಂಕರಿಯ ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ನಡೆಯಲಿದೆ.

ಮುಖ್ಯ ಕಾರ್ಯಕ್ರಮದ ಮೊದಲು, ಸಂಜೆ 5 ಗಂಟೆಯಿಂದ 'Red Box Stories ಹೆಸರಿನಲ್ಲಿ ಪ್ರದರ್ಶನವು ಇರಲಿದೆ. ಪತ್ರ ಬರೆಯುವ ಕಲೆಯನ್ನು ನೆನಪಿಸುವ ಸಲುವಾಗಿ, ಇಂಡಿಯಾ ಪೋಸ್ಟ್‌ನ ಸಹಯೋಗದೊಂದಿಗೆ ಪರಮ್‌ನ ಕಲಾವಿದರೇ ರಚಿಸಿದ ಚಿತ್ರಗಳನ್ನೊಳಗೊಂಡ ಪೋಸ್ಟ್‌ ಕಾರ್ಡ್‌ಗಳ ಪ್ರದರ್ಶನ ಹಾಗೂ ಮಾರಾಟ ಇರುತ್ತದೆ. ಇದರಲ್ಲಿ ತಮ್ಮ ಆತ್ಮೀಯರಿಗೆ ಸಂದೇಶವನ್ನು ಬರೆದು ಕಳುಹಿಸುವ ವ್ಯವಸ್ಥೆಯೂ ಇರುತ್ತದೆ.

ಕಲೆ ಮತ್ತು ಸಂಸ್ಕೃತಿಯ ಕುರಿತಾದ ಈ ಅರ್ಥಪೂರ್ಣ ಚರ್ಚೆ ಹಾಗೂ ಪ್ರದರ್ಶನದಲ್ಲಿ ಭಾಗವಹಿಸಲು ಬಯಸುವವರು ಬುಕ್‌ ಮೈ ಶೋ ಅಥವಾ ನೇರವಾಗಿಯೇ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು.

ಕಲಾ ಸಂವಾದದ ಉದ್ದೇಶ

ಸಾಂಪ್ರದಾಯಿಕ ಮತ್ತು ಸಮಕಾಲೀನ ಕಲಾವಿದರ ನಡುವೆ ವಿಚಾರ ವಿನಿಮಯವನ್ನು ಪ್ರೋತ್ಸಾಹಿಸುವುದು, ಕಲಾತ್ಮಕ ಚಿಂತನೆಯ ವಿಕಸನಕ್ಕೆ ಒಳನೋಟ ನೀಡುವುದು ಮತ್ತು ಯುವ ಕಲಾವಿದರನ್ನು ಪ್ರೇರೇಪಿಸುವುದಾಗಿದೆ.

ಇನ್ನು ಮೊದಲ 'ಕಲಾ ಸಂವಾದ' ಕಾರ್ಯಕ್ರಮವು 2024ರ ಆಗಸ್ಟ್ 24ರಂದು ಯಶಸ್ವಿಯಾಗಿ ನಡೆದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

"ನನಗೆ ಬೇಕಿರುವುದು ಅದೊಂದೆ...": ರಷ್ಯಾ-ಯುಕ್ರೇನ್ ಯುದ್ಧ ಕೊನೆಗೊಳಿಸಲು ಟ್ರಂಪ್ ಗೆ ಪುತಿನ್ ಷರತ್ತು; ಈಡೇರುತ್ತಾ 11 ವರ್ಷಗಳ ಗುರಿ?

Ro-Ko ಕಟ್ಟಿಹಾಕಿದ ಆಸೀಸ್: ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯ ಸೋತ Team India

ದೊಡ್ಡಬಳ್ಳಾಪುರ: "ಹೃದಯವಂತ ಆರ್.ಎಲ್.ಜಾಲಪ್ಪ ಜೀವನ‌ ಪಥ"; ಕೃತಿ ಲೋಕಾರ್ಪಣೆಗೊಳಿಸಿದ ಸಿಎಂ ಸಿದ್ದರಾಮಯ್ಯ!

ದೊಡ್ಡವರ ಮನೆಗೆ ಹೋಗಬಾರದಿತ್ತು: ಶಾರುಖ್ ಖಾನ್ ಮನೆ ಪಾರ್ಟಿಯಲ್ಲಿ ಆದ ಕಹಿ ಅನುಭವ ಬಿಚ್ಚಿಟ್ಟ ನಟ ಗುಲ್ಶನ್ ದೇವಯ್ಯ!

ಬೆಳಗಾವಿ 'ಡಿಸಿಸಿ ಬ್ಯಾಂಕ್' ಚುನಾವಣೆ: ಮತಗಟ್ಟೆ ಬಳಿ ಜಾರಕಿಹೊಳಿ- ಸವದಿ ಬಣಗಳ ನಡುವೆ ಮಾರಾಮಾರಿ!

SCROLL FOR NEXT